ವಿಧಾನಸೌಧ ಅತಿ ಭದ್ರತಾ ವಲಯ ಎಂದು ಘೋಷಿಸಲು ಸರ್ಕಾರ ನಿರ್ಧಾರ

ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧದ ಸುತ್ತಲಿನ ಪ್ರದೇಶವನ್ನು ಅತಿ ಭದ್ರತಾ ವಲಯ ಎಂದು....
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧದ ಸುತ್ತಲಿನ ಪ್ರದೇಶವನ್ನು ಅತಿ ಭದ್ರತಾ ವಲಯ ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸುಖಾ ಸುಮ್ಮನೆ ವಿಧಾನಸೌಧಕ್ಕೆ ಬಂದು ಹೋಗುವವರಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ವಿಕಾಸಸೌಧ, ಬಹುಮಹಡಿ ಕಟ್ಟಡ ಹಾಗೂ ಕೆಪಿಎಸ್ ಸಿ ಸೇರಿದಂತೆ ವಿಧಾಸೌಧದ ಸುತ್ತಲಿನ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು 'ಆಡಳಿತ ಜಿಲ್ಲೆ' ಎಂದು ಘೋಷಿಸಿ ಅತಿ ಭದ್ರತಾ ವಲಯಕ್ಕೆ ತರಲು ಸರ್ಕಾರ ನಿರ್ಧರಿಸಿದೆ.
ಒಮ್ಮೆ ಆಡಳಿತ ಜಿಲ್ಲೆ ಎಂದು ಘೋಷಿಸಿದ ನಂತರ ಭದ್ರತೆಗೆ ವಿಶೇಷ ಪೊಲೀಸರನ್ನು ನೇಮಕ ಮಾಡಲಾಗುತ್ತದೆ. ಈ ಪೊಲೀಸ್ ಸಿಬ್ಬಂದಿಗೆ ಬೇರೆ ಬಣ್ಣದ ಸಮವಸ್ತ್ರ ಹಾಗೂ ಆಧುನಿಕ ಶಸ್ತ್ರಾಸ್ತ್ರ ನೀಡಲಾಗುತ್ತದೆ. ವಿಧಾನಸೌಧದ ಸುತ್ತಲಿನ ಪ್ರದೇಶ ಪ್ರವೇಶಿಸಲು ಎಲ್ಲರನ್ನೂ ಕೂಲಂಕುಷವಾಗಿ ತಪಾಸಣೆಗೆ ಒಳಪಡಿಸಿ ಅವರ ವಿವರ, ಮಾಹಿತಿ ಪಡೆದ ನಂತರ ಒಳಗೆ ಬಿಡಲಾಗುತ್ತದೆ. 
ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಸಾರ್ವಜನಿಕರಿಗೆ ಭೇಟಿಗೆ ಮಧ್ಯಾಹ್ನ 3ರಿಂದ 5 ಗಂಟೆ ಸಮಯ ನಿಗದಿ ಮಾಡಲು ತೀರ್ಮಾನಿಸಿದ್ದು, ಅದು ಪಾಸ್ ಇದ್ದವರಿಗೆ ಮತ್ತು ಅಗತ್ಯ ಕೆಲಸ ಇದ್ದರೆ ಮಾತ್ರ ಪ್ರವೇಶ. ಇಲ್ಲದಿದ್ದರೆ ಸುಖಾ ಸುಮ್ಮನೆ ಬಂದು ಹೋಗುವವರಿಗೆ ವಿಧಾಸೌಧ ಬಂದ್ ಆಗಲಿದೆ.
ಇತ್ತೀಚಿಗಷ್ಟೇ ಮಾಧ್ಯಮಗಳಿಗೆ ನಿಯಂತ್ರಣ ಹೇರುವುದಕ್ಕಾಗಿ ಅತಿ ಭದ್ರತಾ ವಲಯ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಮಾಧ್ಯಮಗಳನ್ನು ನಿಯಂತ್ರಿಸಲು ಅಲ್ಲ. ವಿಧಾನಸೌಧಕ್ಕೆ ನಿತ್ಯವೂ ದಲ್ಲಾಳಿಗಳು ಬರುತ್ತಿದ್ದಾರೆ. ದಲ್ಲಾಳಿಗಳ ವಿಡಿಯೋ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ. ಇದರಿಂದ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ತೊಡಕಾಗುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com