ಕಾಳಾ ಚಿತ್ರಕ್ಕೆ ಕಂಟಕ, ಕನ್ನಡಪರ ಸಂಘಟನೆಗಳ ಪ್ರತಿಭಟನೆ, ಹಲವು ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನ ರದ್ದು

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ತಡೆಯೊಡ್ಡಿವೆ. ರಾಜ್ಯಾದ್ಯಂತ ಭಾರೀ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ತಡೆಯೊಡ್ಡಿವೆ. ರಾಜ್ಯಾದ್ಯಂತ ಭಾರೀ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಿದರೂ ಕೂಡ ರಾಜ್ಯದ ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿಲ್ಲ.

ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನಗರದ ಹಲವು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳ ಮುಂದೆ ಕಾಳ ಚಿತ್ರ ಬಿಡುಗಡೆಯಾಗದಂತೆ ತಡೆದರು. ಬೆಂಗಳೂರಿನಲ್ಲಿ ಯಾವುದೇ ಥಿಯೇಟರ್ ನಲ್ಲಿ ಇಂದು ಕಾಳ ಚಿತ್ರ ಪ್ರದರ್ಶನವಾಗಲಿಲ್ಲ.

ಮಲ್ಟಿಪ್ಲೆಕ್ಸ್ ಗಳಿಗೆ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ನುಗ್ಗಲು ಪ್ರಯತ್ನಿಸಿದರು. ಆದರೆ ಮೊದಲೇ ನಿಯೋಜನೆಗೊಂಡಿದ್ದ ಪೊಲೀಸರು ಮಲ್ಲೇಶ್ವರದ ಮಂತ್ರಿ ಮಾಲ್, ಯಶವಂತಪುರದ ಒರಯಾನ್ ಮಾಲ್ ಮತ್ತು ಲಿಡೊ ಮಾಲ್ ಗಳಲ್ಲಿ ಪ್ರತಿಭಟನಾಕಾರರನ್ನು ತಡೆಯೊಡ್ಡಿದ ಕಸ್ಟಡಿಗೆ ಕರೆದೊಯ್ದರು.

ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ನಗರದ ಎಲ್ಲಾ ಮಾಲ್ ಗಳು ಮತ್ತು ಥಿಯೇಟರ್ ಗಳ ಮುಂದೆ ನಾವು ಪ್ರತಿಭಟನೆ ನಡೆಸಿದ್ದೇವೆ. ಕಾಳ ಚಿತ್ರ ಇಲ್ಲಿ ಪ್ರದರ್ಶನಗೊಂಡಿಲ್ಲ. ಸಾವಿರಾರು ಕನ್ನಡಪರ ಕಾರ್ಯಕರ್ತರನ್ನು ಕಸ್ಟಡಿಗೆ ಕರೆದೊಯ್ದ ಪೊಲೀಸರು ನಂತರ ಬಿಡುಗಡೆ ಮಾಡಿದರು.

ಮುಂದಿನ ದಿನಗಳಲ್ಲಿಯೂ ಯಾವುದೇ ಚಿತ್ರಮಂದಿರಗಳಲ್ಲಿ ಕಾಳ ಪ್ರದರ್ಶನಗೊಳ್ಳದಂತೆ ನೋಡಿಕೊಳ್ಳುತ್ತೇವೆ. ಒಂದು ವೇಳೆ ಪ್ರದರ್ಶನ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾವು ಥಿಯೇಟರ್ ಮಾಲಿಕರಿಗೆ ಮತ್ತು ವಿತರಕರಿಗೆ ಎಚ್ಚರಿಕೆ ನೀಡಿದ್ದೇವೆ. ಆರಂಭದಲ್ಲಿ ಪ್ರದರ್ಶನ ಆರಂಭಿಸಿದ್ದ ಬಾಲಾಜಿ ಥಿಯೇಟರ್ ನಲ್ಲಿ ನಂತರ ನಿಲ್ಲಿಸಲಾಯಿತು.

ಕಾಳ ಚಿತ್ರವನ್ನು ಪ್ರದರ್ಶನ ಮಾಡಲಿದ್ದ ಚಿತ್ರಮಂದಿರಗಳ ಪಟ್ಟಿಯೊಂದಿಗೆ ಕನ್ನಡಪರ ಕಾರ್ಯಕರ್ತರು ಪ್ರತಿ ಥಿಯೇಟರ್ ಗೆ ಹೋಗಿ ಪ್ರದರ್ಶನ ನಿಲ್ಲಿಸಿದರು. ಅನೇಕ ಕಡೆಗಳಲ್ಲಿ ಥಿಯೇಟರ್ ಮಾಲಿಕರೊಂದಿಗೆ ಮಾತುಕತೆ ನಡೆಸಿದರು. ನಂತರ ಥಿಯೇಟರ್ ಮಾಲಿಕರು ಕೂಡ ಪ್ರದರ್ಶನ ನಿಲ್ಲಿಸಲು ಒಪ್ಪಿಕೊಂಡರು. ಬೆಂಗಳೂರಿನಲ್ಲಿರುವ ವಿತರಕ ಕನಕಪುರ ಶ್ರೀನಿವಾಸ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಚಿತ್ರದ ಪೋಸ್ಟರ್ ಗಳನ್ನು ಹರಿದುಹಾಕಿದರು.

ಅನೇಕ ಚಿತ್ರಮಂದಿರಗಳಲ್ಲಿ ಕಾಳ ಸಿನಿಮಾ ಪ್ರದರ್ಶನ ರದ್ದುಪಡಿಸಿದ್ದರಿಂದ ಸಿನಿಮಾ ನೋಡಲು ಬಂದಿದ್ದವರು ಅರ್ಧಕ್ಕೆ ವಾಪಸ್ಸಾಗಬೇಕಾಯಿತು. ಆದರೆ ಚಿತ್ರಪ್ರದರ್ಶನ ಮುಂದುವರಿಸಲು ಸಾಧ್ಯವಾಗದ್ದಕ್ಕೆ ಮತ್ತು ಪೊಲೀಸರ ಅಶಕ್ತತೆಯನ್ನು ಕಂಡು ರಜನಿಕಾಂತ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೆಲವರು ನೇರವಾಗಿ ಪೊಲೀಸರ ಬಳಿ ಬಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹಲಸೂರು ಪೊಲೀಸರು ಲಿಡೊ ಮಾಲ್ ಹತ್ತಿರ ಇಬ್ಬರನ್ನು ಬಂಧಿಸಿದರು.

ರಾಯಚೂರಿನ ಪದ್ಮನಾಭ ಥಿಯೇಟರ್ ಬಳಿ ಮಧ್ಯಾಹ್ನ 12.30ರ ಪ್ರದರ್ಶನ ರದ್ದಾಗಿತ್ತು. ಟಿಕೆಟ್ ಕಾಯ್ದಿರಿಸಿದ್ದವರಿಗೆ ಹಣವನ್ನು ವಾಪಸ್ ಮಾಡಲಾಯಿತು. ಹಾಸನ, ದಾವಣಗೆರೆ ಮತ್ತು ಮೈಸೂರುಗಳಲ್ಲಿ ಸಹ ಪ್ರದರ್ಶನ ರದ್ದಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com