ಮೇಘ ಗ್ಯಾಸ್
ಮೇಘ ಗ್ಯಾಸ್

ಗೃಹ ಮತ್ತು ವಾಣಿಜ್ಯ ಬಳಕೆಗೆ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಪೂರೈಸುವ ಮೇಘ ಗ್ಯಾಸ್

ಮನೆಗಳು ಮತ್ತು ವಾಣಿಜ್ಯ ಕಚೇರಿಗಳಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಯೋಜನೆಗೆ ಮೇಘ ...

ಬೆಂಗಳೂರು: ಮನೆಗಳು ಮತ್ತು ವಾಣಿಜ್ಯ ಕಚೇರಿಗಳಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಯೋಜನೆಗೆ ಮೇಘ ಎಂಜಿನಿಯರಿಂಗ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಮುಂದಾಗಿದೆ.

ಗ್ರಾಮೀಣ ಭಾರತದಲ್ಲಿ ಇಂತಹ ತನ್ನ ಮೊದಲ ಅಭಿಯಾನಕ್ಕೆ ಮುಂದಾಗಿರುವ ಮೇಘಾ ಗ್ಯಾಸ್ ಕಂಪೆನಿ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಮತ್ತು ಕರ್ನಾಟಕದ ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಯೋಜನೆಗಳ ಕಾರ್ಯವೈಖರಿಯನ್ನು ಈಗಾಗಲೇ ಪರಿಶೀಲಿಸಲಾಗಿದೆ. ಸದ್ಯದಲ್ಲಿಯೇ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸುತ್ತೇವೆ ಎನ್ನುತ್ತಾರೆ ಕಂಪೆನಿಯ ಉಪಾಧ್ಯಕ್ಷ ರಾಜೇಶ್ ರೆಡ್ಡಿ.

ಕೃಷ್ಣಾ ಜಿಲ್ಲೆಯ ಅಗಿರಿಪಳ್ಳಿ ಮತ್ತು ಕಾನೂರುಗಳಲ್ಲಿ ಅನಿಲ ಭರ್ತಿ ಮಾಡುವ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಅನಿಲ ಪೂರೈಕೆ ಮಾಡಲು ಭೂಮಿಯ ಒಳಗೆ ಪೈಪ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ತುಮಕೂರು ಮತ್ತು ಬೆಳಗಾವಿಯಲ್ಲಿ ಕೂಡ ಕೊಳವೆಗಳ ಮೂಲಕ ಅನಿಲ ಪೂರೈಸಲಾಗುತ್ತಿದೆ. ವಾಣಿಜ್ಯ ಬಳಕೆಗೆ ಮೇಘ ಗ್ಯಾಸ್ ನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪೂರೈಸಲು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಿಸುವುದು ಮಾತ್ರವಲ್ಲದೆ ಮೂಲಭೂತ ಸೌಕರ್ಯಗಳಿಂದ ಸಮಾಜ ಕೂಡ ವೃದ್ಧಿಯಾಗುತ್ತದೆ ಎಂದರು.

ಹಸಿರು ಇಂಧನ, ಸ್ವಚ್ಛ ಇಂಧನ ಧ್ಯೇಯದೊಂದಿಗೆ ಕಂಪೆನಿ ಇತ್ತೀಚೆಗೆ ಮೂರು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ. ಕೃಷ್ಣ ಜಿಲ್ಲೆಯ ನಾಗಯಲಂಕದ ಹತ್ತಿರ ಒಎನ್ ಜಿಸಿ ಇತ್ತೀಚೆಗೆ ನೈಸರ್ಗಿಕ ಅನಿಲವನ್ನು ಉತ್ಪತ್ತಿ ಮಾಡಿದ್ದು ಇದು ವಾಣಿಜ್ಯ ಮಟ್ಟದಲ್ಲಿ ಆಗಿದೆ. ಮೇಘ ಸದ್ಯದಲ್ಲಿಯೇ ಒಎನ್ ಜಿಸಿ ಜೊತೆ ಒಪ್ಪಂದ ಮಾಡಿಕೊಂಡು ಪ್ರತಿದಿನಕ್ಕೆ 90,000 ಗುಣಮಟ್ಟ ಕ್ಯೂಬಿಕ್ ಮೀಟರ್ ಅನಿಲವನ್ನು ಪೂರೈಕೆ ಮಾಡುವ ಉದ್ದೇಶ ಹೊಂದಿದೆ.

ಆಂಧ್ರಪ್ರದೇಶದ ಅಗಿರಿಪಳ್ಳಿಯಿಂದ ನೈಸರ್ಗಿಕ ಅನಿಲವನ್ನು ಪೂರೈಸಲು 571 ಕಿಲೋ ಮೀಟರ್ ಉದ್ದದ ಸ್ಟೀಲ್ ಮತ್ತು ಎಂಡಿಪಿಇ ಕೊಳವೆಮಾರ್ಗಗಳನ್ನು ಸ್ಥಾಪಿಸಲಾಗಿದೆ. ಅದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಹಲವು ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ತುಮಕೂರು ಜಿಲ್ಲೆಯಲ್ಲಿ 300 ಕಿಲೋ ಮೀಟರ್ ಉದ್ದದವರೆಗೆ ನೈಸರ್ಗಿಕ ಅನಿಲವನ್ನು ಕೊಳವೆಮಾರ್ಗದ ಮೂಲಕ ಪೂರೈಸಲಾಗುತ್ತದೆ. ಇದು ವಕ್ಕೋಡಿ, ಗುಲೂರು, ಸಂತೆಪೇಟೆ, ಗೊಲ್ಲಹಳ್ಳಿ, ಗೊಲ್ಲರಹಟ್ಟಿ, ಕುಪ್ಪೂರು, ದಾಸಮುದ್ದೆಪಾಳ್ಯ, ಸಿರಾಗೇಟು, ಹಗ್ಗೇರಿ ಮೊದಲಾದ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಇದಕ್ಕೆ ಹೊರತಾಗಿ 75 ಕಿಲೋ ಮೀಟರ್ ಉದ್ದದ ಎಂಡಿಪಿಇ ಕೊಳವೆಮಾರ್ಗ ಸದಾಶಿವನಗರ, ಅನಸಂಕರಿ, ಮಂಡಿಪೇಟೆ, ಗಾಂಧಿನಗರ, ಚಿಕ್ಕಪೇಟೆ ಪ್ರದೇಶಗಳಲ್ಲಿ ಕೂಡ ನಿರ್ಮಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 350 ಕಿಲೋ ಮೀಟರ್ ಉದ್ದದವರೆಗೆ ಸ್ಟೀಲ್, ಎಂಡಿಪಿಇ ಕೊಳವೆಮಾರ್ಗವನ್ನು ಅಳವಡಿಸಲಾಗಿದ್ದು ಹಲವು ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಮೇಘ ಗ್ಯಾಸ್ 50,000 ಎಸ್ ಸಿಎಂಡಿ ನೈಸರ್ಗಿಕ ಅನಿಲವನ್ನು ಬೆಳಗಾವಿ ಜಿಲ್ಲೆಯಲ್ಲಿ ಪೂರೈಸುತ್ತದೆ. ಗ್ರಾಹಕರೊಂದಿಗೆ ನಿರಂತರ ಸಂಪರ್ಕ ಹೊಂದಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ಮೇಘ ಗ್ಯಾಸ್ ವಿನೂತನ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಲಿದೆ ಮತ್ತು ಅದಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಇರುತ್ತದೆ. ಅಲ್ಲದೆ ತನ್ನ ಗ್ರಾಹಕರಿಗೆ ಲಾಯಲ್ಟಿ ಕಾರ್ಡು ಇರುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com