ಬೆಂಗಳೂರಿನಲ್ಲಿ ಮುಂಗಾರಿನಲ್ಲಿ ಹಲವು ಸಮಸ್ಯೆಗಳು: ಉಸ್ತುವಾರಿ ಸಚಿವರ ಮುಂದಿವೆ ಸವಾಲುಗಳು
ಬೆಂಗಳೂರು: ಮುಂಗಾರು ಮಳೆ ನಗರಕ್ಕೆ ಕಾಲಿಟ್ಟ ಹೊತ್ತಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಸಚಿವರ ಮುಂದೆ ಕಸದ ವಿಲೇವಾರಿಯಿಂದ ಹಿಡಿದು ನೆರೆ ಪ್ರವಾಹ, ಒಳ ಚರಂಡಿ, ಗುಂಡಿಗಳನ್ನು ಮುಚ್ಚುವ ಮತ್ತು ಕಳಪೆ ರಸ್ತೆಗಳ ಕಾಮಗಾರಿ ಹೀಗೆ ಹತ್ತು ಹಲವು ಸವಾಲುಗಳಿವೆ. ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಂಡಿರುವ ಡಾ. ಜಿ.ಪರಮೇಶ್ವರ್ ಅವರಿಗೆ ಇದು ಅಗ್ನಿಪರೀಕ್ಷೆಯ ಸಮಯವಾಗಿದೆ.
ಹಲವು ಕಡೆಗಳಲ್ಲಿ ಒಳ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಒಂದು ಬಾರಿ ಸತತವಾಗಿ ಮಳೆ ಬಂದರೆ ಪ್ರವಾಹ ಉಂಟಾಗುತ್ತದೆ.
ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ರಾತ್ರಿ ಹೊತ್ತಿನಲ್ಲಿ ತಗ್ಗು ಪ್ರದೇಶಗಳಲ್ಲಿ ನೆರೆ ಉಂಟಾಗಿ ಜನರಿಗೆ ಸಂಕಷ್ಟವುಂಟಾಗುತ್ತಿರುವುದನ್ನು ಕಾಣಬಹುದು.
ಹಲವು ಕಡೆಗಳಲ್ಲಿ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳು ಕೆರೆಯ ಹತ್ತಿರ ನಿರ್ಮಾಣವಾಗುತ್ತಿವೆ. ಹೀಗಾಗಿ ಜೋರು ಮಳೆ ಸುರಿದಾಗ ಕಟ್ಟಡದೊಳಗೆ ನೀರು ಬಂದು ನಾಗರಿಕರು ಪಡಬಾದರ ಕಷ್ಟ ಎದುರಿಸಬೇಕಾಗುತ್ತಿದೆ. ಒಳ ಚರಂಡಿ ಪಕ್ಕವಿರುವ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ಬಿಬಿಎಂಪಿ ಕೆಡವಿ ಹಾಕುತ್ತಿದ್ದರೂ ಕೂಡ ಸುಪ್ರೀಂ ಕೋರ್ಟ್ ನ ಆದೇಶದ ನಂತರವೂ ಈ ಕೆಲಸವನ್ನು ಪೂರ್ಣಗೊಳಿಸಲು ಮಹಾನಗರ ಪಾಲಿಕೆಗೆ ಮಳೆಗಾಲ ಕಾಲಿಡುವ ಹೊತ್ತಿಗೆ ಸಾಧ್ಯವಾಗುತ್ತಿಲ್ಲ.
ಹಲವು ಕಡೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ಕಟ್ಟಡಗಳನ್ನು ಕೆಡವಲು ಪ್ರಭಾವಿಗಳ ಲಾಬಿಗೆ ಮಣಿಯುತ್ತಿದ್ದಾರೆ. ಕೆಲವು ಅತಿಕ್ರಮಣ ಕಟ್ಟಡಗಳು ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರದ್ದಾಗಿರುವುದರಿಂದ ಪರಮೇಶ್ವರ್ ಅವರಿಗೆ ಮುಂದಿನ ದಿನಗಳು ನಿಜಕ್ಕೂ ಸವಾಲಿನದ್ದಾಗಿದೆ. ಈ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಅವರು ಜೆಡಿಎಸ್ ನ ಒತ್ತಡಕ್ಕೆ ಕೂಡ ಮಣಿಯಬೇಕಾಗುತ್ತದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಸುಮಾರು 70 ಲಕ್ಷ ವಾಹನಗಳು ಸಂಚರಿಸುತ್ತಿದ್ದು ಸಂಚಾರ ದಟ್ಟಣೆ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಸಂಚಾರವನ್ನು ನಿಯಂತ್ರಿಸಲು ಬಿಬಿಎಂಪಿ ಮತ್ತು ಬಿಡಿಎ ಮೇಲ್ಸೇತುವೆ ಮತ್ತು ಅಂಡರ್ ಪಾಸ್ ಗಳನ್ನು ನಿರ್ಮಿಸುತ್ತಿವೆ. ಆದರೆ ಸಂಚಾರ ದಟ್ಟಣೆ ಸಮಸ್ಯೆಗೆ ಇದು ತಾತ್ಕಾಲಿಕ ಪರಿಹಾರವಷ್ಟೆ.
ಹಲವು ಕಡೆಗಳಲ್ಲಿ ಜಾಗ ಇಲ್ಲದಿರುವುದರಿಂದ ರಸ್ತೆ ಅಗಲೀಕರಣ ಅಸಾಧ್ಯವಾಗಿದೆ. ಸಂಚಾರಿ ಪೊಲೀಸ್ ಸಿಬ್ಬಂದಿಯ ಕೊರತೆಯಿರುವುದರಿಂದ ಗೃಹ ಸಚಿವರಾಗಿ ಆ ಸಮಸ್ಯೆಯನ್ನು ಬಗೆಹರಿಸುವುದು ಕೂಡ ಪರಮೇಶ್ವರ್ ಅವರ ಮುಂದಿದೆ.
ಕಳೆದ ವರ್ಷ ರಸ್ತೆಯಲ್ಲಿ ಗುಂಡಿಗಳಿಂದಾಗಿ ಮತ್ತು ಅಪಘಾತಗಳಿಂದಾಗಿ ಪ್ರಯಾಣಿಕರ ಸಾವು ಸಂಭವಿಸಿ ಭಾರೀ ಸುದ್ದಿಯಾಗಿತ್ತು. ಈ ವರ್ಷ ಕೂಡ ನಾಲ್ಕ ಬಾರಿ ಮಳೆ ಬಿದ್ದರೆ ಹೊಂಡ ಗುಂಡಿಗಳು ಏಳುವ ಪರಿಸ್ಥಿತಿಯಿದ್ದು ಅಪಘಾತಗಳನ್ನು ತಪ್ಪಿಸಲು ನಗರಾಡಳಿತಕ್ಕೆ ಉಸ್ತುವಾರಿ ಸಚಿವರು ಈಗಲೇ ಆದೇಶ ನೀಡಬೇಕಾಗುತ್ತದೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚಿಸಿ ಆಡಳಿತ ಮತ್ತು ಸುಧಾರಣೆಗಳನ್ನು ತರುವುದು ಸಚಿವರ ಮುಂದಿರುವ ಮೊದಲ ಸವಾಲಾಗಿದೆ. ಇಲ್ಲದಿದ್ದರೆ ಯಥಾಪ್ರಕಾರ ಹಳೆಯ ಸಮಸ್ಯೆಗಳೇ ಮರುಕಳಿಸುತ್ತದೆ ಎನ್ನುತ್ತಾರೆ ನಗರ ತಜ್ಞ ವಿ ರವಿಚಂದರ್.
ಬಿಬಿಎಂಪಿ ಸರಹದ್ದಿನಲ್ಲಿ ಘನ ತ್ಯಾಜ್ಯ ವಿಲೇವಾರಿಯ ತಜ್ಞ ಸಮಿತಿಯ ಸದಸ್ಯ ರಮಾಕಾಂತ್, ಬೆಂಗಳೂರಿನಲ್ಲಿ ಪ್ರತಿನಿತ್ಯ 4,000 ಟನ್ ಕಸ ಉತ್ಪತ್ತಿಯಾಗುತ್ತದೆ. ತ್ಯಾಜ್ಯಗಳನ್ನು ಸಂಸ್ಕರಿಸಲು ಬಿಬಿಎಂಪಿ ಕೆಲವು ಘಟಕಗಳನ್ನು ರಚಿಸಿದೆ. ಸಂಸ್ಕರಣಾ ಘಟಕ ಸರಿಯಾಗಿ ಕೆಲಸ ನಿರ್ವಹಿಸುತ್ತದೆಯೇ ಎಂದು ಸಚಿವ ಡಾ ಜಿ ಪರಮೇಶ್ವರ್ ಅವರು ನೋಡಿಕೊಳ್ಳಬೇಕು.
ಪ್ರಸ್ತುತ ಅವುಗಳಲ್ಲಿ ಅರ್ಧದಷ್ಟು ಘಟಕಗಳು ಕೆಲಸ ಮಾಡುತ್ತಿಲ್ಲ. ಪ್ರತ್ಯೇಕಿಸಿದ ಹಸಿ ತ್ಯಾಜ್ಯಗಳನ್ನು ಕಳುಹಿಸಲು ಬಿಬಿಎಂಪಿಗೆ ಸಾಧ್ಯವಿಲ್ಲ. ಕಸದ ವಿಲೇವಾರಿ ಸಮಸ್ಯೆ ಮತ್ತೆ ಯಾವ ಸಂದರ್ಭದಲ್ಲಿಯಾದರೂ ಮರುಕಳಿಸುವ ಸಾಧ್ಯತೆಯಿದೆ. ಕಸ ವಿಲೇವಾರಿ ಗುತ್ತಿಗೆದಾರರಿಗೆ ಹಣ ನೀಡದಿರುವುದರಿಂದ ಪೌರ ಕಾರ್ಮಿಕರು ಸಹ ಯಾವ ಸಂದರ್ಭದಲ್ಲಿ ಬೇಕಾದರೂ ಮುಷ್ಕರ ನಡೆಸುವ ಸಾಧ್ಯತೆಯಿದೆ. ಇದು ಕೂಡ ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಬಹುದೊಡ್ಡ ಸವಾಲು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ