ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದೆ. ಮಳೆಯ ರೌದ್ರವತಾರದಿಂದಾಗಿ ನಾಲ್ಕನೇ ದಿನವಾದ ಇಂದು ಕೂಡಾ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಶ್ಚಿಮ ಘಟ್ಟದ ಸಹಲೇಶಪುರದ ಮೂರು ಕಡೆಗಳಲ್ಲಿ ಭೂಕುಸಿತವಾಗಿದ್ದು, ಬೆಂಗಳೂರು- ಮಂಗಳೂರು ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸದ ಪ್ರಯಾಣಿಕರು ಬಸ್ ನಲ್ಲಿ ತೆರಳುವಂತಾಯಿತು. ಎಲ್ಲಾ ಪ್ರಯಾಣಿಕರ ದರವನ್ನು ರೈಲ್ವೆ ಅಧಿಕಾರಿಗಳು ಹಿಂತಿರುಗಿಸಿದರು.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ ಹೊರಟ ರೈಲು ಅನೇಕ ಕಡೆಗಳಲ್ಲಿ ಹಳಿ ಮೇಲೆ ನೀರು ನಿಂತು ಕಾರಣ ಹಾಸನದಲ್ಲಿಯೇ ನಿಲುಗಡೆ ಹೊಂದಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತಾಧಿಗಳು ಸ್ನಾನ ಮಾಡದಂತಾಗಿದೆ.ಧಾರಾಕಾರ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿದ್ದು, ಭಕ್ತಾಧಿಗಳು ನದಿಗೆ ಇಳಿಯದಂತೆ ಸಂಬಂಧಿತ ಆಡಳಿತ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಮಲೆನಾಡಿನ ಎಲ್ಲ ಸಣ್ಣ ನದಿಗಳು , ಕೊಳ್ಳಗಳು ಭರ್ತಿಯಾಗಿವೆ. ಭದ್ರ ನದಿಯ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬಂದಿದೆ. ಮುಂಜಾಗ್ರತಾ ಕ್ರಮವಾಗಿ ಮಳೆ ಪೀಡಿತ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಮಂಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 1400 ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದು, ರಾತ್ರಿ ವೇಳೆಯಲ್ಲಿ ವಿದ್ಯುತ್ ಇಲ್ಲದೆ ತೀವ್ರ ತೊಂದರೆ ಎದುರಿಸುವಂತಾಗಿದೆ. ಕಳೆದ ರಾತ್ರಿ ಬೆಳಗಾವಿಯ ಜಿಲ್ಲೆಯ ಸವದತ್ತಿ ಯಲ್ಲಮ್ಮನ ದೇವಾಲಯದೊಳಗೆ ನೀರು ನುಗ್ಗಿದೆ.
ಅಧಿಕ ಮಾಸದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದು, ದೇವಿಯ ದರ್ಶನ ಪಡೆಯಲು ಪರದಾಡುವಂತಾಗಿದೆ. ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಅಗತ್ಯ ಸುರಕ್ಷತೆ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಬೆಳಗಾವಿಯ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು. ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ 93 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ನಿನ್ನೆ ದಿನ 2 ಮಿಮಿಯಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 124 ಮಿಲಿಮೀಟರ್ ನಷ್ಟು ಮಳೆಯಾಗಿದೆ.
ತಲಕಾವೇರಿ, ನಾಪೋಕ್ಲು, ಶ್ರೀಮಂಗಳ, ಶನಿವಾರ ಸಂತೆ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ವ್ಯಾಪಕ ಮಳೆಯಾಗಿದೆ. ಕಾವೇರಿ ಕೊಳ್ಳದ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಹಾರಂಗಿ, ಹೇಮಾವತಿ, ಕೆ. ಆರ್. ಎಸ್ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.