ಕಳೆದ 6 ವರ್ಷಗಳಲ್ಲಿ ಒಮ್ಮೆ ಕೂಡ ನನ್ನ ಮಗ ಸಿಂಧಗಿ ಬಿಟ್ಟು ಹೋಗಿರಲಿಲ್ಲ: ಜಾನಕಿ ವಾಗ್ಮರೆ

2012ರಿಂದ ನನ್ನ ಮಗ ಸಿಂದಗಿ ಬಿಟ್ಟು ಹೊರಹೋಗಿಲ್ಲ, ಇದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ...
ಗೌರಿ ಲಂಕೇಶ್-ಪರಶುರಾಮ ವಾಗ್ಮರೆ (ಸಂಗ್ರಹ ಚಿತ್ರ)
ಗೌರಿ ಲಂಕೇಶ್-ಪರಶುರಾಮ ವಾಗ್ಮರೆ (ಸಂಗ್ರಹ ಚಿತ್ರ)

ವಿಜಯಪುರ: 2012ರಿಂದ ನನ್ನ ಮಗ ಸಿಂದಗಿ ಬಿಟ್ಟು ಹೊರಹೋಗಿಲ್ಲ, ಇದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಪರಶುರಾಮ ವಾಗ್ಮರೆಯ ತಾಯಿ ಜಾನಕಿ ವಾಗ್ಮರೆ ನೀಡಿರುವ ಪ್ರತಿಕ್ರಿಯೆ.

ನನ್ನ ಮಗ ಮುಗ್ಧ, ಅಮಾಯಕ. ಡಿಗ್ರಿ ಮುಗಿಸಿದ ನಂತರ ನನ್ನ ಮಗ ನಮ್ಮ ಪಟ್ಟಣವನ್ನು ಬಿಟ್ಟು ಹೋಗಿಲ್ಲ. ವಿನಾಕಾರಣ ಪೊಲೀಸರು ಆತನನ್ನು ಕೊಲೆ ಕೇಸಿನಲ್ಲಿ ಸಿಕ್ಕಿಸಿಹಾಕುತ್ತಿದ್ದಾರೆ. ನಾಲ್ವರು ಪೊಲೀಸರು ಕಳೆದ ಭಾನುವಾರ ಬೆಳಗ್ಗೆ ನಮ್ಮ ಮನೆಗೆ ಬಂದು ಅವನನ್ನು ಕರೆದುಕೊಂಡು ಹೋದರು ಎನ್ನುತ್ತಾರೆ ಜಾನಕಿ. ಪರಶುರಾಮ ಅಂಗಡಿಯೊಂದರಲ್ಲಿ ದಿನಗೂಲಿ ನೌಕರನಾಗಿ ಮತ್ತು ಕಂಪ್ಯೂಟರ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು ಎಂದು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಪರಶುರಾಮ ವಾಗ್ಮರೆ  ರಾಯಚೂರಿನ ಸಿಂದನೂರಿನ ಖಾಸಗಿ ಕಾಲೇಜೊಂದರಲ್ಲಿ ಬಿ ಕಾಂ ಪದವಿ ಮುಗಿಸಿದ ನಂತರ ಸಿಂದಗಿಯ ಬಸವನಗರದಲ್ಲಿ ತನ್ನ ಪೋಷಕರೊಂದಿಗೆ ನೆಲೆಸಿದ್ದ.

ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಪೊಲೀಸರು ನಮ್ಮ ಮನೆಯತ್ತ ದೌಡಾಯಿಸಿ ಏನೂ ಕಾರಣ ಹೇಳದೆ ನಮ್ಮ ಮಗನನ್ನು ಕರೆದುಕೊಂಡು ಹೋದರು. ಈ ಹಿಂದೆ ಕೆಲವು ಕೇಸುಗಳಿಗೆ ಸಂಬಂಧಪಟ್ಟಂತೆ ಬಂಧಿತನಾಗಿದ್ದರಿಂದ ಆ ಸಂಬಂಧ ವಿಚಾರಣೆ ನಡೆಸಲು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ನಾನು ಭಾವಿಸಿದೆ. ಆದರೆ ನಂತರ ಅವನ ಫೋಟೋವನ್ನು ಟಿವಿಯಲ್ಲಿ ನೋಡಿದಾಗ ಆಘಾತಕ್ಕೊಳಗಾದೆ. ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಅವನನ್ನು ಎಳೆದುತಂದಿದ್ದಾರೆ ಎಂದು ಗೊತ್ತಾಗಿ ಇನ್ನಷ್ಟು ದುಃಖಿತಳಾದೆ. ಆದರೆ ನನಗೆ ನ್ಯಾಯದ ಮೇಲೆ ನಂಬಿಕೆಯಿದೆ, ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಜಾನಕಿ ಹೇಳುತ್ತಾರೆ.

ವಿಜಯಪುರದ ಹಿರಿಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿ, ಪರಶುರಾಮ ವಾಗ್ಮೆರೆಯನ್ನು ಈ ಹಿಂದೆ ಪೊಲೀಸರು ಹಲವು ಕೇಸುಗಳಲ್ಲಿ ಬಂಧಿಸಿದ್ದರು. ಆತ 20 ವರ್ಷದವನಾಗಿದ್ದಾಗ 2012ರ ಜನವರಿ 1ರಂದು ಸಿಂದಗಿಯ ತಹಸೀಲ್ದಾರ್ ಕಚೇರಿ ಎದುರು ಪಾಕಿಸ್ತಾನ ಧ್ವಜ ಹಾರಿಸಿ ಹಿಂದೂ ಮುಸ್ಲಿಂ ಗಲಭೆ ಸೃಷ್ಟಿಸಲು ಯತ್ನಿಸಿದ್ದ. ಈ ಸಂಬಂಧ ಪೊಲೀಸರು ಅವನನ್ನು ಬಂಧಿಸಿದ್ದರೂ ಕೂಡ. ಹಿಂದೂ ಸಂಘಟನೆಯೊಂದರ ಸಕ್ರಿಯ ಕಾರ್ಯಕರ್ತನಾಗಿದ್ದ.

ವಿಶೇಷ ತನಿಖಾಧಿಕಾರಿಗಳು ವಾಗ್ಮೆರೆಯ ಸಹಚರ ಸುನಿಲ್ ಅಗ್ಸರನನ್ನು ಕೂಡ ಬಂಧಿಸಿದ್ದು ಅವನನ್ನು ವಿಚಾರಣೆಗೊಳಪಡಿಸಿದ್ದಾರೆ. ಬೆಂಗಳೂರಿಗೆ ಕರೆತಂಡು ಗೌರಿ ಲಂಕೇಶ್ ಹತ್ಯೆಯಲ್ಲಿ ಆತನ ಪಾತ್ರ ಕೂಡ ಇದೆಯೇ ಎಂದು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com