ಗೌರಿ ಲಂಕೇಶ್ ಕೊಂದಿದ್ದು ವಾಗ್ಮರೆ; 5 ರಾಜ್ಯಗಳಲ್ಲಿ ಅನಾಮಧೇಯ ಸಂಘಟನೆ ಕೆಲಸ: ಎಸ್ಐಟಿ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎಸ್ಐಟಿ ತನಿಖೆಯಲ್ಲಿ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎಸ್ಐಟಿ ತನಿಖೆಯಲ್ಲಿ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ. 
ಸದ್ಯ ಎಸ್ಐಟಿ ಬಂಧಿಸಿರುವ ಆರೋಪಿಗಳ ಪೈಕಿ ಪರಶುರಾಮ್ ವಾಗ್ಮೋರೆ ತಾನೇ ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿರುವುದಾಗಿ ಒಪ್ಪಿಕೊಂಡಿದ್ದು ಎಸ್ಐಟಿಗೆ ಮಹತ್ವದ ಗೆಲುವು ಸಿಕ್ಕಂತಾಗಿದೆ. ಈ ಮಧ್ಯೆ ಎಸ್ಐಟಿಯ ಹಿರಿಯ ಅಧಿಕಾರಿಯೊಬ್ಬರು ಗೌರಿ ಲಂಕೇಶ್, ಎಂಎಂ ಕಲಬುರಗಿ ಮತ್ತು ಮಹಾರಾಷ್ಟ್ರದ ಗೋವಿಂದಾ ಪನ್ಸಾರೆ ಅವರ ಹತ್ಯೆಗೆ ಒಂದೇ ಗನ್ ಅನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. 
ಗೌರಿ ಲಂಕೇಶ್, ಎಂಎಂ ಕಲಬುರಗಿ ಮತ್ತು ಗೋವಿಂದಾ ಪನ್ಸಾರೆ ಅವರನ್ನು ಒಂದೇ ಗನ್ ನಿಂದ ಹತ್ಯೆ ಮಾಡಲಾಗಿದೆ ಎಂಬ ಫೋರೇನ್ಸಿಕ್ ವರದಿಯಲ್ಲಿ ಧೃಡವಾಗಿದೆ. ಆದರೆ ಸದ್ಯ ಕೃತ್ಯಕ್ಕೆ ಬಳಸಲಾಗಿರುವ ಗನ್ ಇನ್ನು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಈ ಹತ್ಯೆಗಳ ಹಿಂದೆ ಹಿಂದೂ ಸಂಘಟನೆಯೊಂದು ಕೆಲಸ ಮಾಡುತ್ತಿದ್ದು ಸುಮಾರು 60 ಮಂದಿ ಸದಸ್ಯರನ್ನು ದೇಶದ ಐದು ರಾಜ್ಯಗಳಲ್ಲಿ ಇಂತಹ ಕೆಲಸಕ್ಕೆ ನಿಯೋಜಿಸಲಾಗಿದೆ. ಈ ತಂಡ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಲ್ಲಿ ಕಾರ್ಯಾಚರಣೆಯಲ್ಲಿದೆ. ಇನ್ನು ಉತ್ತರಪ್ರದೇಶದಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಯಾವುದೇ ವರದಿ ಇಲ್ಲ ಎಂದು ಹೇಳಿದ್ದಾರೆ. 
ಹಿಂದುತ್ವ ಸಂಘಟನೆಗಳಾದ ಮಹಾರಾಷ್ಟ್ರ ಮೂಲದ ಹಿಂದೂ ಜಾಗೃತಿ ಸಮಿತಿ ಮತ್ತು ಸನಾತನ್ ಸಂಸ್ಥಾನಗಳು ಇಂತಹ ಜನರನ್ನು ನೇಮಕ ಮಾಡಿಕೊಂಡಿದ್ದರೂ ಈ ಹತ್ಯೆಗಳಲ್ಲಿ ನೇರವಾಗಿ ಭಾಗಿಯಾಗಿರುವುದಿಲ್ಲ ಎಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com