ಶುಲ್ಕದಲ್ಲಿ ಶೇಕಡಾ 15ರಷ್ಟು ಹೆಚ್ಚಳಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ಒತ್ತಾಯ

2018-19ನೇ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕದಲ್ಲಿ ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: 2018-19ನೇ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕದಲ್ಲಿ ಶೇಕಡಾ 15ರಷ್ಟು ಹೆಚ್ಚಳ ಮಾಡಬೇಕೆಂದು ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸಮೂಹ(ಕಾಮೆಡ್ ಕೆ) ಮತ್ತು ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟಗಳು ಕಾಲೇಜು ಶುಲ್ಕದಲ್ಲಿ ಶೇಕಡಾ 15ರಷ್ಟು ಹೆಚ್ಚಳ ಮಾಡುವಂತೆ ಒತ್ತಾಯಿಸಿವೆ.

ಆದರೆ ಶುಲ್ಕ ಹೆಚ್ಚಳ ಮಾಡಿದರೆ ಕಳೆದ ವರ್ಷ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ನಡುವೆ ನಡೆದ ಒಪ್ಪಂದಕ್ಕೆ ವಿರುದ್ಧವಾಗಿರಲಿದೆ. ಕಳೆದ ವರ್ಷ ಮಾಡಿಕೊಂಡ ಒಪ್ಪಂದದ ಪ್ರಕಾರ ಮೂರು ವರ್ಷಗಳವರೆಗೆ ಶೇಕಡಾ 10ರಷ್ಟು ಶುಲ್ಕ ಹೆಚ್ಚಳ ಮಾಡಬಹುದಾಗಿದೆ.

ಸರ್ಕಾರ ನೌಕರರ ವೇತನವನ್ನು ಶೇಕಡಾ 30ರಷ್ಟು ಹೆಚ್ಚಳ ಮಾಡಿದೆ ಹೀಗಾಗಿ ವಿದ್ಯಾರ್ಥಿಗಳ ಕಾಲೇಜು ಶುಲ್ಕದಲ್ಲಿ ಹೆಚ್ಚಳ ಮಾಡಬೇಕು ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯಗಳ ಅಧೀನದಲ್ಲಿರುವ ಕಾಲೇಜುಗಳು ನಿಗದಿಪಡಿಸಿದ ಶುಲ್ಕಕ್ಕೆ ಸಮನಾಗಿರಬೇಕೆಂದು ಸಹ ಒತ್ತಾಯಿಸುತ್ತಿದ್ದಾರೆ.

ಆದರೆ ನಾವು ಈ ವಿಷಯವನ್ನು ಕಾನೂನಾತ್ಮಕವಾಗಿ ಪರಿಶೀಲಿಸುತ್ತೇವೆ. ಕಳೆದ ವರ್ಷ 2006ರ ಕಾಯ್ದೆ ಪ್ರಕಾರ ಒಪ್ಪಂದಕ್ಕೆ ಸಹಿ ಮಾಡಿದ್ದೇವೆ, ಅದರಲ್ಲಿ ಮುಂದಿನ ಮೂರು ವರ್ಷಗಳವರೆಗೆ ಶೇಕಡಾ 10ರಷ್ಟು ಮಾತ್ರ ಶುಲ್ಕ ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಆದರೂ ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕವನ್ನು ಶೇಕಡಾ 10ರಷ್ಟು ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳುವಂತೆ ಕಾಣುತ್ತಿದೆ.

ಕರ್ನಾಟಕ ವೃತ್ತಿಪರ ಕಾಲೇಜು ಫೌಂಡೇಶನ್ ಅಧ್ಯಕ್ಷ ಎಂ ಆರ್ ಜಯರಾಮ್, ನಾವು ಶೇಕಡಾ 15ರಷ್ಟು ಶುಲ್ಕ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ಸಾಧ್ಯವಿಲ್ಲ ಎನ್ನುತ್ತಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ವೈದ್ಯಕೀಯ ವಿಶ್ವವಿದ್ಯಾಲಯಗಳ ಅಧೀನ ಕಾಲೇಜುಗಳ ಪ್ರತಿನಿಧಿಗಳ ಸಭೆಯನ್ನು ಸಚಿವರು ಇಂದು ಕರೆದಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com