ಮೆಟ್ರೊ ರೈಲು ನಿಗಮವನ್ನು ನಿಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಿ: ಮುಖ್ಯ ಕಾರ್ಯದರ್ಶಿ ರತ್ನಪ್ರಭಾ
ಬೆಂಗಳೂರು: ನಮ್ಮ ಮೆಟ್ರೊ ನಿಗಮದ ಅಧಿಕಾರಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಗಣಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭ ಹೈಕೋರ್ಟ್ ಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು, ಬೆಂಗಳೂರು ಮೆಟ್ರೊ ನಿಗಮವನ್ನು(ಬಿಎಂಆರ್ ಸಿಎಲ್) ದೇಶದ ಇತರ ಮೆಟ್ರೊಗಳಿಗೆ ಹೋಲಿಸಬಾರದೆಂದು ನೌಕರರಿಗೆ ಸಲಹೆ ನೀಡಿದ್ದಾರೆ.
ದೇಶದಲ್ಲಿರುವ ಇತರ ಮೆಟ್ರೊ ಕಂಪೆನಿಗಳಿಗೆ ಬೆಂಗಳೂರು ಮೆಟ್ರೊವನ್ನು ಹೋಲಿಸಲು ಸಾಧ್ಯವಿಲ್ಲ, ಏಕೆಂದರೆ ಇದಕ್ಕೆ ಕೇವಲ 2 ವರ್ಷವಾಗಿದ್ದು ಇನ್ನು ಕೂಡ ನಷ್ಟದಲ್ಲಿಯೇ ಸಂಚರಿಸುತ್ತಿದೆ. ಬಿಎಂಆರ್ ಸಿಎಲ್ ನ ಹಣಕಾಸು ಪರಿಸ್ಥಿತಿಯನ್ನು ನೌಕರರು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಎನ್ನುತ್ತಾರೆ.
ಅವರು ಬಿಎಂಆರ್ ಸಿಎಲ್ ವ್ಯವಸ್ಥಾಪಕ ಮಂಡಳಿ ಮತ್ತು ನೌಕರರ ಒಕ್ಕೂಟದೊಂದಿಗೆ ಸಭೆ ನಡೆಸಿ ನಂತರ ಚರ್ಚೆಯ ವಿಷಯಗಳನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಎಸ್ ಪೊನ್ನಣ್ಣ ಹೈಕೋರ್ಟ್ ಮುಂದೆ ಮಂಡಿಸಿದರು.
ಹೈಕೋರ್ಟ್ ಜೂನ್ 4ರಂದು ನೀಡಿದ್ದ ಆದೇಶಕ್ಕೆ ಬದ್ಧವಾಗಿ ನ್ಯಾಯಾಧೀಶ ಪೊನ್ನಣ್ಣ ಎರಡು ಸಭೆಗಳ ನಡಾವಳಿಗಳನ್ನು ಹೈಕೋರ್ಟ್ ಗೆ ಸಲ್ಲಿಸಿದರು.
ಬಿಎಂಆರ್ ಸಿಎಲ್ ನೌಕರರ ಪರ ವಕೀಲರು, ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದರು. ಮುಂದಿನ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ. ನಿನ್ನೆಯ ಕೋರ್ಟ್ ವಿಚಾರಣೆಯಲ್ಲಿ ನೌಕರರು ತಮ್ಮ ಮುಷ್ಕರ ನೊಟೀಸನ್ನು ಹಿಂತೆಗೆದುಕೊಳ್ಳುವ ಮೂಲಕ ಮುಕ್ತಾಯವಾಯಿತು.
ಸಭೆಯಲ್ಲಿ ರತ್ನಪ್ರಭಾ ನೌಕರರ ಪ್ರತಿನಿಧಿಗಳನ್ನುದ್ದೇಶಿಸಿ, ತಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ವ್ಯವಸ್ಥಾಪಕ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಿ. ಮೆಟ್ರೊ ನೌಕರರು ಸರ್ಕಾರದ ಭಾಗವಾಗಿದ್ದು ಸಾರ್ವಜನಿಕ ಸೇವೆಯಲ್ಲಿರುವವರು. ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಸಾರ್ವಜನಿಕರಿಗೆ ಅನಿಯಮಿತವಾಗಿ ಮೆಟ್ರೊ ಸೇವೆ ನೀಡಬೇಕೆಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ