85ರ ಇಳಿ ವಯಸ್ಸಿನಲ್ಲಿ 30ಕ್ಕೂ ಹೆಚ್ಚು ಆಸನಗಳನ್ನು ಮಾಡುವ ಹೆಚ್ ಡಿ ದೇವೇಗೌಡರು!

ಮಾಜಿ ಪ್ರಧಾನ ಮಂತ್ರಿ ಜೆಡಿಎಸ್ ವರಿಷ್ಠ 85 ವರ್ಷದ ಹೆಚ್ ಡಿ ದೇವೇಗೌಡರು ಆಹಾರ ಸೇವಿಸುವುದರಲ್ಲಿ...
ಯೋಗ ಗುರುವಿನ ಮಾರ್ಗದರ್ಶನದಲ್ಲಿ ಪ್ರಾಣಾಯಾಮ ಮಾಡುತ್ತಿರುವ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ
ಯೋಗ ಗುರುವಿನ ಮಾರ್ಗದರ್ಶನದಲ್ಲಿ ಪ್ರಾಣಾಯಾಮ ಮಾಡುತ್ತಿರುವ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ

ಹಾಸನ: ಮಾಜಿ ಪ್ರಧಾನ ಮಂತ್ರಿ ಜೆಡಿಎಸ್ ವರಿಷ್ಠ 85 ವರ್ಷದ ಹೆಚ್ ಡಿ ದೇವೇಗೌಡರು ಆಹಾರ ಸೇವಿಸುವುದರಲ್ಲಿ, ದಿನಚರಿಯಲ್ಲಿ ಶಿಸ್ತಿಗೆ ಹೆಸರಾದವರು. ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದ ದೇವೇಗೌಡರು ಹಲವು ಔಷಧಗಳನ್ನು ಮಾಡಿದರೂ ಕಡಿಮೆಯಾಗದೆ ಕೊನೆಗೆ ಮೊರೆ ಹೋಗಿದ್ದು ಯೋಗಾಭ್ಯಾಸದ ಕಡೆಗೆ.

ಏಳು ವರ್ಷಗಳ ಹಿಂದೆ ಕಾರ್ತಿಕ್ ಪಾಟೀಲ್ ಎಂಬುವವರ ಬಳಿ ಯೋಗಾಭ್ಯಾಸ ಕಲಿಯಲು ಆರಂಭಿಸಿದರು. 35 ವರ್ಷದ ಕಾರ್ತಿಕ್ ಪಾಟೀಲ್ ದೇವೇಗೌಡರಿಗೆ ನಿತ್ಯ ಯೋಗ ತರಬೇತಿ ನೀಡುತ್ತಾರೆ. ತಮ್ಮ ಶ್ರದ್ಧೆ, ನಿರಂತರ ಅಭ್ಯಾಸ ಮತ್ತು ನಿಷ್ಠೆಯಿಂದ 85ರ ಈ ಇಳಿ ವಯಸ್ಸಿನಲ್ಲಿ ಕೂಡ ಆರೋಗ್ಯ ಕಾಪಾಡಿಕೊಂಡಿರುವ ದೇವೇಗೌಡರು ತಮ್ಮ ದೇಹವನ್ನು ಬಗ್ಗಿಸುವುದನ್ನು, ಕಾಲು ಉದ್ದ ನೀಡುವುದನ್ನು ಸಲೀಸಾಗಿ ಮಾಡುತ್ತಾರೆ. ಅಷ್ಟೇ ಅಲ್ಲ 30 ಆಸನಗಳನ್ನು ಕೂಡ ಪ್ರತಿನಿತ್ಯ ಮಾಡುತ್ತಾರೆ. ಯೋಗ ಮಾಡುವುದರಲ್ಲಿ ಕಾರ್ತಿಕ್ ಪಾಟೀಲ್ ದೇವೇಗೌಡರಿಗೆ 100ಕ್ಕೆ 100 ಅಂಕಗಳನ್ನು ಕೊಡುತ್ತಾರೆ.

ದೇವೇಗೌಡರಿಗೆ ಮಂಡಿನೋವು ಕಾಣಿಸಿಕೊಂಡು ಮಂಡಿಯನ್ನು ಕೆಳಗೆ ಊರಲೂ ಸಹ ಸಾಧ್ಯವಾಗದ ಸಂದರ್ಭದಲ್ಲಿ ಔಷಧಿಯಿಂದ ವಾಸಿಯಾಗುವುದಿಲ್ಲ ಎಂದು ಗೊತ್ತಾದಾಗ ಬೆಂಗಳೂರಿನ ತಮ್ಮ ನಿವಾಸ ಪದ್ಮನಾಭನಗರ ಹತ್ತಿರವಿರುವ ಉತ್ತರಹಳ್ಳಿಯ ಶ್ರೀ ಜಯಸರಸ್ವತಿ ಸಂಸ್ಥೆಗೆ ಸೇರಿಸಿದರಂತೆ.

ಅಗಾಧ ಮಂಡಿನೋವು ಹೊಂದಿದ್ದ ಅವರ ನೋವನ್ನು ಶಮನ ಮಾಡುವುದು ನನಗೆ ಸವಾಲಾಗಿತ್ತು. ದೇವೇಗೌಡರಿಗೆ ಯೋಗಾಭ್ಯಾಸ ಆರಂಭಿಸಿದೆ ಎಂದು ಮೆಲುಕು ಹಾಕುವ ಕಾರ್ತಿಕ್, ದೇವೇಗೌಡರು ಪ್ರತಿದಿನ ಬೆಳಗ್ಗೆ 7.30ಕ್ಕೆ ತಮ್ಮ ನಿವಾಸದಲ್ಲಿ ಯೋಗಾಭ್ಯಾಸಕ್ಕೆ ಸಿದ್ದರಾಗಿ ನಿಲ್ಲುತ್ತಾರಂತೆ. ಕೆಲವೊಮ್ಮೆ ನಮ್ಮ ಸಂಸ್ಥೆಗೆ ಬಂದು ಯೋಗಾಭ್ಯಾಸ ಮಾಡುತ್ತಾರೆ ಎನ್ನುತ್ತಾರೆ.

ಭಾನುವಾರ ರಜೆ ಹಾಗೂ ಇತರ ಬ್ಯುಸಿಯ ಒತ್ತಡದ ದಿನಗಳಲ್ಲಿ ಇಂದು ಯೋಗ ಮಾಡುವುದು ಬೇಡ, ನಾಳೆ ಮಾಡಿದರಾಯಿತು ಎಂದು ದೇವೇಗೌಡರು ಯೋಗ ಮಾಡುವುದನ್ನು ತಪ್ಪಿಸುವುದಿಲ್ಲವಂತೆ. ಯೋಗ ಮಾಡುವ ಮೊದಲು ಎರಡು ಗ್ಲಾಸು ನೀರು ಮತ್ತು ಒಂದು ಲೋಟ ಕಾಫಿ ಸೇವಿಸುತ್ತಾರೆ.

ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಅವರ ಶಿಷ್ಯರಾಗಿರುವ ಕಾರ್ತಿಕ್ ಪಾಟೀಲ್, ''ನನ್ನ ಗುರುಗುಳು ತಮ್ಮ ಪುಸ್ತಕದಲ್ಲಿ ಸುಮಾರು 600 ಆಸನಗಳ ಬಗ್ಗೆ ಬರೆದಿದ್ದಾರೆ. ಅವುಗಳಲ್ಲಿ ದೇವೇಗೌಡರು 30ರಿಂದ 35 ಆಸನಗಳನ್ನು ಸುಲಲಿತವಾಗಿ ಮಾಡುತ್ತಾರೆ. ಈ ವಯಸ್ಸಿನಲ್ಲಿ ಅವರು ಅಷ್ಟೊಂದು ಆಸನಗಳನ್ನು ಮಾಡುವುದು ನಿಜಕ್ಕೂ ಅದ್ಭುತ. ಇಲ್ಲಿ ಪ್ರತಿಯೊಂದು ಆಸನ ಕೂಡ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ದೇವೇಗೌಡರು ವೀರಾಸನವನ್ನು ಮಾಡುವುದರಿಂದ ಅವರ ಮಂಡಿನೋವು ಕಡಿಮೆಯಾಗಿದೆ ಎನ್ನುತ್ತಾರೆ.

ಕಾರ್ತಿಕ್ ಅವರ ಬಳಿ ಸುಮಾರು 800 ವಿದ್ಯಾರ್ಥಿಗಳು ಯೋಗ ಕಲಿಯುತ್ತಿದ್ದಾರೆ. ಅವರಲ್ಲಿ ದೇವೇಗೌಡರು ಗಣ್ಯ ವ್ಯಕ್ತಿ. ಆದರೆ ಅವರು ಯಾವತ್ತೂ ತಾನು ರಾಜಕೀಯ ಮುಖಂಡ, ವಿಶೇಷ ವ್ಯಕ್ತಿ ಎಂದು ನಡೆದುಕೊಳ್ಳುವುದಿಲ್ಲ. ತೀರಾ ಸರಳ ವ್ಯಕ್ತಿತ್ವ ಅವರದ್ದು. ನಾನು ಹೇಳುವುದನ್ನು ಕೇಳಿಸಿಕೊಂಡು ಅದರಂತೆ ಅಭ್ಯಾಸ ಮಾಡುತ್ತಾರೆ. ಧ್ಯಾನ ಮತ್ತು ಪ್ರಾಣಾಯಾಮ ಕೂಡ ಮಾಡುತ್ತಾರೆ. ವಿಧೇಯ ವಿದ್ಯಾರ್ಥಿಯಂತೆ ಕಲಿತು ಅದನ್ನು ಪಾಲಿಸುತ್ತಾರೆ. ತಮ್ಮ ಆಹಾರದಲ್ಲಿ ಹೆಚ್ಚಾಗಿ ರಾಗಿ ಮುದ್ದೆ ಮತ್ತು ತರಕಾರಿಗಳನ್ನು ಸೇವಿಸುವ ದೇವೇಗೌಡರು ನಿಜಕ್ಕೂ ಸ್ಪೂರ್ತಿ. ಯೋಗ ಮಾಡುವುದಕ್ಕೆ ವಯಸ್ಸಿನ ಮಿತಿ ಇಲ್ಲ ಎಂದು ಕಾರ್ತಿಕ್ ಪಾಟೀಲ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com