

ಬೆಂಗಳೂರು: ಹೊಸ ಸಮ್ಮಿಶ್ರ ಸರ್ಕಾರ ಪೂರಕ ಬಜೆಟ್ ಮಂಡಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಸಲಹೆಯನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ತಿರಸ್ಕರಿಸಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ರಾಜ್ಯದ ಆದ್ಯತೆಗಳನ್ನು ಪರಿಗಣಿಸಿ ಹೊಸ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕೆಂಬುದು ಅವರ ಲೆಕ್ಕಾಚಾರ.
ಸಿದ್ದರಾಮಯ್ಯನವರ ಸಲಹೆಗಳನ್ನು ನಾನು ಟೀಕಿಸುವುದಿಲ್ಲ. ಅವರು ಈ ಹಿಂದೆ ಹಲವು ಬಜೆಟ್ ಗಳನ್ನು ಮಂಡಿಸಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇದು ಹೊಸದು. ಹೊಸ ಸರ್ಕಾರವಾಗಿರುವುದರಿಂದ ಪೂರಕ ಬಜೆಟ್ ಗಿಂತ ಹೊಸ ಬಜೆಟ್ ನ್ನು ಮಂಡಿಸುವುದು ಒಳ್ಳೆಯದು ಎಂದು ದೇವೇಗೌಡರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇಂದ್ರದಲ್ಲಿ 1996ರ ಜುಲೈ 22ರಂದು ತಾವು ಪ್ರಧಾನಿಯಾಗಿ ಯುನೈಟೆಡ್ ಫ್ರಂಟ್ ಅಧಿಕಾರದಲ್ಲಿದ್ದಾಗ ಅಂದಿನ ಹಣಕಾಸು ಸಚಿವ ಪಿ ಚಿದಂಬಂರಂ ಬಜೆಟ್ ಮಂಡಿಸಿದ್ದರು. ಅಂದು ಮಂಡಿಸಲಾಗಿದ್ದು ಪೂರ್ಣ ಪ್ರಮಾಣದ ಬಜೆಟ್ ನ್ನು ಕನಸಿನ ಬಜೆಟ್ ಎಂದು ಕರೆಯಲಾಗಿತ್ತು. ಅಂದು ಬಜೆಟ್ ಮಂಡಿಸಿದ್ದರಿಂದ ಕಾಂಗ್ರೆಸ್ ಜನಪ್ರಿಯತೆ ಮರೆಯಾಗಿತ್ತೆ ಎಂದು ದೇವೇಗೌಡ ಪ್ರಶ್ನಿಸಿದ್ದಾರೆ.
ಅಲ್ಲದೆ ಅಂದು ಹಿಂದಿನ ಕಾಂಗ್ರೆಸ್ ಘೋಷಿಸಿದ್ದ ಯೋಜನೆಗಳನ್ನು ಯುನೈಟೆಡ್ ಫ್ರಂಟ್ ಸರ್ಕಾರ ನಿಲ್ಲಿಸಿರಲಿಲ್ಲ. ಏಕೆಂದರೆ ಅದು ಸಮ್ಮಿಶ್ರ ಸರ್ಕಾರದ ಬದ್ಧತೆಯಾಗಿತ್ತು. ಇಂದು ರಾಜ್ಯದ ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ಕೂಡ ಹಾಗೆಯೇ. ಕುಮಾರಸ್ವಾಮಿಯವರು ಕೂಡ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸುಗಮ ಆಡಳಿತಕ್ಕೆ ಯಾವುದೇ ತೊಂದರೆಯಾಗಬಾರದು ಎಂಬುದು ಅವರ ಉದ್ದೇಶವಾಗಿದೆ ಎನ್ನುತ್ತಾರೆ ದೇವೇಗೌಡ.
ಹೊಸ ಸರ್ಕಾರ ರಾಜ್ಯದ ಜನತೆಗೆ ಹೊಸ ಸಂದೇಶ ಕಳುಹಿಸಲು ಹೊಸ ಬಜೆಟ್ ನ ಅವಶ್ಯಕತೆಯಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಘೋಷಣೆ ಮಾಡಿದ್ದ ಯೋಜನೆಗಳ ಜಾರಿಗೆ ಹೊಸ ಬಜೆಟ್ ನ ಅವಶ್ಯಕತೆಯಿದೆ, ಅದಕ್ಕೆ ಪೂರಕ ಬಜೆಟ್ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮ್ಮಿಶ್ರ ಸರ್ಕಾರ ಅಂದ ಮೇಲೆ ಇಂತಹ ಭಿನ್ನಾಭಿಪ್ರಾಯಗಳು ಆರಂಭದ ಹಂತದಲ್ಲಿ ಕಾಣಿಸುವುದು ಸಹಜ. ಮುಂದಿನ ದಿನಗಳಲ್ಲಿ ಅದು ಶಮನವಾಗಲಿದೆ ಎಂದ ದೇವೇಗೌಡ, ಸರ್ಕಾರದಲ್ಲಿನ ಕೆಲವು ನ್ಯೂನತೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಬಗೆಹರಿಸುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಬಜೆಟ್ ಅಧಿವೇಶನ ಜುಲೈ 5ರಂದು ಆರಂಭವಾಗಲಿದೆ.