ಮೇ 2018ರವರೆಗಿನ ರೈತರ ಬೆಳೆ ಸಾಲ ಮನ್ನಾ ನಿಶ್ಚಿತ: ಸಮನ್ವಯ ಸಮಿತಿ ಒಪ್ಪಿಗೆ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ(ಸಿಎಂಪಿ) ರೈತರ ಸಾಲ ...
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬಗ್ಗೆ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕರು
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬಗ್ಗೆ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ(ಸಿಎಂಪಿ) ರೈತರ ಸಾಲ ಮನ್ನಾ ಆದ್ಯತೆಯ ವಿಷಯವಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಉಪ ಸಮಿತಿ ತನ್ನ ಅಂತಿಮ ಕರಡಿನಲ್ಲಿ ರೈತರು ಮೇ 2018ರವರೆಗೆ ತೆಗೆದುಕೊಂಡ ಎಲ್ಲಾ ಬೆಳೆ ಸಾಲಗಳನ್ನು ಮನ್ನಾ ಮಾಡಲು ಒಪ್ಪಿಕೊಂಡಿದೆ. ಉಪ ಸಮಿತಿಯ ಕರಡಿನ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ನಾಳೆ ಸಮನ್ವಯ ಸಮಿತಿ ಸಭೆ ನಡೆಯಲಿದೆ.

ಉಪ ಸಮಿತಿಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಸಚಿವರಾದ ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ, ಹೆಚ್ ಡಿ ರೇವಣ್ಣ ಮತ್ತು ಬಂಡೆಪ್ಪ ಕಾಶಂಪುರ್ ಇದ್ದಾರೆ. ಇವರೆಲ್ಲರೂ ಸೇರಿ ಚರ್ಚೆ ನಡೆಸಿ ಸಮತೂಕದ ಕರಡನ್ನು ಸಿಎಂಪಿಗೆ ರಚಿಸಿದ್ದು ಅದರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಕುರಿತು ಕೂಡ ತೀರ್ಮಾನಿಸಲಾಯಿತು.

ಎರಡೂ ಪಕ್ಷಗಳ ಚುನಾವಣಾ ಪೂರ್ವ ಪ್ರಣಾಳಿಕೆಯನ್ನು ಆಧರಿಸಿ ಸಮತೂಕದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಮುಂದಿನ 5 ವರ್ಷಗಳಲ್ಲಿ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗಲು ಅನುಕೂಲವಾಗಬೇಕು. ಮೇ 2018ರವರೆಗೆ ರೈತರು ಎಲ್ಲಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಿಂದ ತೆಗೆದುಕೊಂಡ ಬೆಳೆ ಸಾಲವನ್ನು ಮನ್ನಾ ಮಾಡಲು ಅವಿರೋಧವಾಗಿ ಒಪ್ಪಿಗೆ ನೀಡಿದ್ದೇವೆ, ಸಾಲಮನ್ನಾದ ವಿಧಾನಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಸಭೆಯ ನಂತರ ವೀರಪ್ಪ ಮೊಯ್ಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com