ಗೌರಿ ಲಂಕೇಶ್ ಹತ್ಯೆ: ನವೀನ್'ಗೆ ಬಲಪಂಥೀಯ ಸಂಘಟನೆಗಳೊಂದಿನ ನಂಟು ಶಂಕೆ, ತನಿಖೆ ಚುರುಕುಗೊಳಿಸಿದ ಎಸ್ಐಟಿ

ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿ ನವೀನ್ ಕುಮಾರ್'ಗೆ ಬಲಪಂಥೀಯ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಶಂಕೆಗಳು ವ್ಯಕ್ತವಾಗಿರುವ...
ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್
ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್
Updated on
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿ ನವೀನ್ ಕುಮಾರ್'ಗೆ ಬಲಪಂಥೀಯ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 
ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಎಸ್ಐಟಿ, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಗೆ ಬಂಧಿತ ಆರೋಪಿ ಹಿಂದೂ ಸಂಘಟನೆ ಕಾರ್ಯಕರ್ತ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ್ನು ಕರೆದೊಯ್ದು ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. 
ಗೌರಿ ಅವರ ಹತ್ಯೆಗೂ ಮುನ್ನ ನವೀನ್ ಕುಮಾರ್ ಮಹಾರಾಷ್ಟ್ರ, ಗೋವಾ ಹಾಗೂ ಬೆಳಗಾವಿ, ಮದ್ದೂರು ಮತ್ತು ಮಂಗಳೂರಿನಲ್ಲಿ ಕೆಲ ಹಿಂದೂ ಪರ ಸಂಘಟನೆಗಳ ಮುಖಂಡರ ಜೊತೆಗೆ ಸಭೆ ನಡೆಸಿದ್ದ. ಈ ಸಭೆಯಲ್ಲಿ ಹತ್ಯೆ ಸಂಚು ನಡೆದಿರಬಹುದು ಎಂದು ಶಂಕೆಗಳು ವ್ಯಕ್ತವಾಗತೊಡಗಿವೆ. ಈ ಹಿನ್ನಲೆಯಲ್ಲಿ ಆರೋಪಿಯನ್ನು ಸ್ಥಳ ಪರಿಶೀಲನೆಗೆ ಕರೆದೊಯ್ಯಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 
ಭಾನುವಾರ ರಾತ್ರಿ ಅಥವಾ ಸೋಮವಾರ ಬೆಂಗಳೂರಿನಿಂದ ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಕರೆದುಕೊಂಡು ತೆರಳಿರುವ ತನಿಖಾ ತಂಡಗಳು, 2 ದಿನಗಳು ತಪಾಸಣೆ ನಡೆಸಿ ಮಂಗಳವಾರ ಬೆಳಗ್ಗೆ ಮರಳಿದ್ದಾರೆ. ಪೊಲೀಸ್ ಕಸ್ಟಡಿ ಮುಗಿಯುವ ಹಿನ್ನಲೆಯಲ್ಲಿ ಅಂದು ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮದ್ದೂರು ತಾಲೂಕಿನ ಹಿಂದೂ ಸಂಘಟನೆಯ ಕಾರ್ಯಕರ್ತ ನವೀನ್ ಕುಮಾರ್ ನನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. 
ಗೌರಿ ಹತ್ಯೆ ಪ್ರಕರಣದಲ್ಲಿ ನವೀನ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾನೆಂದು ಒಂದೆಡೆ ಅಧಿಕಾರಿಗಳು ಹೇಳುತ್ತಿದ್ದರೆ, ಮತ್ತೊಂದೆಡೆ ತಮ್ಮ ವೈಫಲ್ಯ ಮರೆಮಾಚಲು ಪೊಲೀಸರು ನವೀನ್ ಕುಮಾರ್ ನನ್ನು ಬಂಧನಕ್ಕೊಳಪಡಿಸಿದ್ದಾರೆಂಬ ಮಾತುಗಳು ಕೇಳಿ ಬರತೊಡಗಿವೆ. ಗೌರಿ ಹತ್ಯೆಯಾದ 2017ರ ಸೆ.5 ರಂದು ನವೀನ್ ಕುಮಾರ್ ಹೊರ ರಾಜ್ಯದಲ್ಲಿದ್ದ ಎಂದು ಹೇಳಲಾಗುತ್ತಿದೆ. 
ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ಮಲಾ ರಾಣಿಯವರು ವಾದ ಮಂಡಿಸಿದ್ದು, ನವೀನ್ ಅವರು ಬೆಳಗಾವಿಯಲ್ಲಿರುವ ಶಸ್ತ್ರಾಸ್ತ್ರ ಡೀಲರ್ ಗಳೊಂದಿಗೆ ನಂಟು ಹೊಂದಿದ್ದು, ಇದರಿಂದಾಗಿ ಈತ ಇಂದು ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ. 
ಸನಾತನ ಸಂಸ್ಥಾ ವಕ್ತಾರರು ದೃಢಪಡಿಸಿದ್ದು, ನವೀನ್ ಅವರು ರಾಜ್ಯ ಹೊರಗೆ ಹಾಗೂ ಒಳಗೆ ಧರ್ಮಸಭೆಗಳಲ್ಲಿ ಭಾಗಿಯಾಗಿದ್ದರು. ಆದರೆ, ಯಾವುದೇ ಸಂಘಟನೆಯೊಂದಿಗೂ ನೇರವಾಗಿ ಸಂಪರ್ಕವನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. 
ಗೌರಿ ಹತ್ಯೆ ಪ್ರಕರಣದಲ್ಲಿ ಸಾಕಷ್ಟು ಪ್ರಶ್ನೆಗಳಿದ್ದು, ಅವುಗಳಿಗೆ ಉತ್ತರ ಸಿಗಬೇಕಿದೆ. ಜೀವಂತ ಬುಲೆಟ್ ಗಳು ಹಾಗೂ ಪಿಸ್ತೂಲ್ ಗಳನ್ನು ಎಲ್ಲಿಂದ ತರಲಾಗಿತ್ತು ಎಂಬುದರ ಕುರಿತು ಉತ್ತರ ಸಿಗಬೇಕಿದೆ. ಪ್ರಕರಣವು ರಾಜಕೀಯ ಅಥವಾ ಸೈದ್ಧಾಂತಿಕ ಸಂಪರ್ಕ ಹೊಂದಿರುವಂತೆ ತೋರುತ್ತಿದ್ದು, ನವೀನ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ. 
ಪ್ರಸ್ತುತದ ಪರಿಸ್ಥಿತಿಯಲ್ಲಿ ಗೌರಿ ಹತ್ಯೆಯಾಗುವುದಕ್ಕೂ ಮುನ್ನ ಈ ವಿಚಾರ ನವೀನ್ ಅವರಿಗೆ ತಿಳಿದಿತ್ತು ಎಂಬುದನ್ನಷ್ಟೇ ನಾವು ಹೇಳಬಹುದು. ಗೌರಿ ಹತ್ಯೆಯಾದ ಬಳಿಕ ಘಟನಾ ಸ್ಥಳದಿಂದ ನವೀನ್ ಅವರು ಬಂದಿದ್ದರು ಎಂಬುದು ದೃಢವಾಗಿದೆ. ಆದರೆ, ಹಂತಕರಿಗೆ ನವೀನ್ ಹೇಗೆ ಸಹಾಯ ಮಾಡಿದ್ದರು ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ. 
ತನಿಖಾ ಕಾರ್ಯಾಚರಣೆಯ ಮಾಹಿತಿಗಳು ಬಹಿರಂಗವಾಗುತ್ತಿದ್ದರಿಂದಾಗಿ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದರು ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com