
ಬೆಂಗಳೂರು : ಐದು ವರ್ಷಗಳ ನಂತರ ಪದವಿ ಪೂರ್ವ ಶಿಕ್ಷಣ ಮಂಡಳಿ ಶುಲ್ಕವನ್ನು ಪರಿಷ್ಕರಿಸಿದೆ.
2018-19ರ ಅಕಾಡೆಮಿಕ್ ವರ್ಷದಲ್ಲಿ ನೂತನ ಶುಲ್ಕ ಜಾರಿಗೆ ಬರಲಿದೆ. ಇದು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಅನುದಾನಿತ , ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಗೆ ಇಲಾಖೆ ನಿರ್ದೇಶನ ನೀಡಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯಸರ್ಕಾರ ನೇಮಿಸಿದ್ದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಪ್ರತಿಐದು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಹಿಂದೆ 2013ರ ಅಕಾಡೆಮಿಕ್ ವರ್ಷದಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗಿತ್ತು.
ಪರಿಷ್ಕೃತ ಶುಲ್ಕ ಮಾದರಿಯಲ್ಲಿ ಶೇ 30 ರಿಂದ 60ರಷ್ಟು ಹೆಚ್ಚಳವಾಗಿದೆ. ಟ್ಯೂಷನ್ ಶುಲ್ಕ ಶೇ.31. 94 ರಷ್ಟು ಅಂದರೆ ಈಗಿರುವ 1008 ರೂ ನಿಂದ 1,330 ರೂ ಹೆಚ್ಚಳ ಆಗಿದೆ. ಅಂಕಪಟ್ಟಿಗಾಗಿ ನೀಡುವ ಶುಲ್ಕ 36 ರೂ. ನಿಂದ 50 ರೂ.ಗೆ ಹೆಚ್ಚಳವಾಗಿದೆ. ಮರು ಮೌಲ್ಯಮಾಪನದ ಶುಲ್ಕ 1260 ರೂನಿಂದ 1670ಕ್ಕೆ ಹೆಚ್ಚಳವಾಗಿದೆ.
ಪರಿಷ್ಕೃತ ಶುಲ್ಕದ ಬಗ್ಗೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ. ಶಿಖಾ, ತಜ್ಞರ ವರದಿ ಆಧಾರದ ಮೇಲೆ ಶುಲ್ಕ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಅಕಾಡೆಮಿಕ್ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇಲಾಖೆಯೇ ಶುಲ್ಕ ನಿಗದಿಪಡಿಸಿದ್ದರೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಪ್ರವೇಶ ದುಬಾರಿಯಾಗಿದೆ. ಇದು ಇಲಾಖೆಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
Advertisement