ಕುವೇಶಿ ಅರಣ್ಯದಲ್ಲಿನ ಕೆನೋಪಿವಾಕ್ ಶೀಘ್ರದಲ್ಲಿಯೇ ಪ್ರವಾಸಿಗರಿಗೆ ಮುಕ್ತ

ಉತ್ತರ ಕನ್ನಡ ಜಿಲ್ಲೆ, ಜೊಯಿಡಾ ತಾಲೂಕಿನ ಕುವೇಶಿ ಅರಣ್ಯ ವಲಯದಲ್ಲಿ ನಿರ್ಮಿಸಿರುವ ದೇಶದ ಮೊಟ್ಟ ಮೊದಲ ಕೆನೋಪಿ ವಾಕ್ ( ಮರಗಳ ಮೇಲೆ ನಡಿಗೆ ) ಶೀಘ್ರದಲ್ಲಿಯೇ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಕೆನೋಪಿವಾಕ್
ಕೆನೋಪಿವಾಕ್

ಕಾರವಾರ : ಉತ್ತರ ಕನ್ನಡ ಜಿಲ್ಲೆ, ಜೊಯಿಡಾ ತಾಲೂಕಿನ ಕುವೇಶಿ ಅರಣ್ಯ ವಲಯದಲ್ಲಿ ನಿರ್ಮಿಸಿರುವ ದೇಶದ ಮೊಟ್ಟ ಮೊದಲ ಕೆನೋಪಿ ವಾಕ್ ( ಮರಗಳ ಮೇಲೆ ನಡಿಗೆ ) ಶೀಘ್ರದಲ್ಲಿಯೇ ಪ್ರವಾಸಿಗರಿಗೆ ಮುಕ್ತವಾಗಲಿದೆ. ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ವಿಶ್ವದ  ಕೆಲವೇ ರಾಷ್ಟ್ರಗಳಲ್ಲಿ ಈ ಕೆನೋಪಿ ವಾಕ್  ಕಾಣಸಿಗುತ್ತದೆ.

ಫೆ.18 ರಂದು ಇದನ್ನು ಬೃಹತ್ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಉದ್ಘಾಟನೆ ಮಾಡಿದ್ದರೂ ಕಾನೂನು ಪಾಲನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮುಕ್ತಗೊಳಿಸಿರಲಿಲ್ಲ. ಕಳೆದ ತಿಂಗಳು ಅರಣ್ಯ ಇಲಾಖೆ ಜಂಗಲ್ ಲಾಡ್ಜ್ ಮತ್ತು ರೆಸ್ಟೋರೆಂಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ.

 ನೆಲದಿಂದ 30 ಮೀಟರ್ ಎತ್ತರದಲ್ಲಿ ಪ್ರವಾಸಿಗರು ಮರಗಳ ಮೇಲೆ ನಡಿಯಬಹುದಾಗಿದೆ. ಕ್ಯಾಸ್ಟಲ್ ರಾಕ್ ಬಳಿಯ ಕುನಿಗಿನಿ ಚೆಕ್ ಪೋಸ್ಟ್  ಮೂಲಕ ಬರಬೇಕಾಗುತ್ತದೆ. ಅಲ್ಲಿ ಗುರುತಿನ ಪತ್ರ ಮತ್ತಿತರ ದಾಖಲೆಗಳನ್ನು ಒದಗಿಸಿದ ನಂತರ ಟಿಕೆಟ್ ಪಡೆಯಬಹುದಾಗಿದೆ ಎಂದು ಜಂಗಲ್ ಲಾಡ್ಜ್ ಮತ್ತು ರೆಸ್ಟೋರೆಂಟ್  ವ್ಯವಸ್ಥಾಪಕ ಸಿ. ಅನಿಕೇತನ್ ತಿಳಿಸಿದ್ದಾರೆ.

ಕುವೇಶಿಯವರೆಗೂ ಸ್ವಂತ ವಾಹನದಲ್ಲಿ ಬರಬಹುದಾಗಿದೆ. ಕುವೇಶಿಯಿಂದ  2.5 ಕಿಲೋ ಮೀಟರ್, ಅರಣ್ಯ ಮೂಲಕ ಅರಣ್ಯ ಸಿಬ್ಬಂದಿ ಹಾಗೂ ಜಂಗಲ್ ಲಾಡ್ಜ್ ಸಿಬ್ಬಂದಿಯೊಂದಿಗೆ  ಕೆನೋಪಿವಾಕ್ ತಲುಪಬಹುದಾಗಿದೆ. ವಯಸ್ಕರಿಗೆ 500 ಮತ್ತು ಮಕ್ಕಳಿಗೆ 300 ರೂ. ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೇಶ , ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ನೆಲದಿಂದ 30 ಮೀಟರ್ ಎತ್ತರದ  240 ಮೀಟರ್  ಉದ್ದದ  ಕೆನೋಪಿ ವಾಕ್  ನ್ನು ಸುಮಾರು 84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದೆ.

ಕೆನೋಪಿ ವಾಕ್ ಈ ತಿಂಗಳಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಮಳೆಗಾಲದಲ್ಲಿ ಜೂನ್ ನಿಂದ ಅಕ್ಟೋಬರ್ ವರೆಗೂ ಮುಚ್ಚಲಾಗುತ್ತದೆ. ಮಳೆಗಾಲದ ನಂತರ ಮತ್ತೆ ಪ್ರಾರಂಭಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆಸಕ್ತರು ಟಿಕೆಟ್ ಗಾಗಿ ಜಂಗಲ್ ಲಾಡ್ಜ್ ಅಂಡ್ ರೆಸ್ಟೋರೆಂಟ್ ವೆಬ್ ಸೈಟ್  , ದೂ. 9449597871, 9449599765 ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com