ಕೆಜಿ ಬೋಪಯ್ಯ ಕುರಿತ ಅರ್ಜಿ ವಿಚಾರಣೆ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?

ಯಾರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಸೂಚಿಸಲು ಸಾಧ್ಯವಿಲ್ಲ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಯಾರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಸೂಚಿಸಲು ಸಾಧ್ಯವಿಲ್ಲ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಅಗಿ ನೇಮಕ ಮಾಡಿದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರಶ್ನಿಸಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರ-ವಿರೋಧ ವಾದಗಳನ್ನು ಆಲಿಸಿತು.
ಈ ವೇಳೆ ಕಾಂಗ್ರೆಸ್ ಪರ ತನ್ನ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್ ಅವರು, ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾಗಿರುವ ಬೋಪಯ್ಯ ಅವರ ಟ್ರ್ಯಾಕ್ ರೆಕಾರ್ಡ್ ಸರಿಯಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಅವರ ವಿರುದ್ಧ ದೂರುಗಳು ದಾಖಲಾಗಿತ್ತು. ಈ ಹಿಂದೆ ಬೋಪಯ್ಯ ವಿರುದ್ಧ ಕೋರ್ಟ್ ಕೂಡ ಆದೇಶ ನೀಡಿತ್ತು. ಹೀಗಾಗಿ ಕೆಜಿ ಬೊಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವುದು ಸಮಸ್ಯೆಯಿಂದ ಕೂಡಿದೆ. ಅವರು ಶಾಸಕರಿಗೆ ಪ್ರಮಾಣ ವಚನ ಬೋದಿಸುವುದು ಸರಿಯಿಲ್ಲ.ಅವರ ಮೇಲ್ವಿಚಾರೆಯಲ್ಲಿ ವಿಶ್ವಾಮತ ಪ್ರಕ್ರಿಯೆ ಸರಿಯಲ್ಲ ಎಂದು ಹೇಳಿದರು.
ಅಂತೆಯೇ ಸದನದ ಹಿರಿಯ ಶಾಸಕರನ್ನು ಸ್ಪೀಕರ್ ಆಗಿ ನೇಮಿಸುವುದು ಸಂಪ್ರದಾಯ. ಆದರೆ ಸದನದಲ್ಲಿ ಬೋಪಯ್ಯ ಕಿರಿಯ ಶಾಸಕರಾಗಿದ್ದಾರೆ. ಹೀಗಾಗಿ ಅವರ ನೇಮಕ ಸರಿಯಲ್ಲ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಅವರು, ಈ ಹಿಂದೆ ಸಾಕಷ್ಟು ಬಾರಿ ಕಿರಿಯ ಶಾಸಕರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ವಿಕೆ ಪಾಟೀಲ್ ಹಿರಿಯ ಸದಸ್ಯರಾಗಿರಲಿಲ್ಲ. ಆದರೂ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿತ್ತು ಎಂದು ವಾದಿಸಿದರು.
ಇನ್ನು ಉಭಯ ವಕೀಲರ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ನ್ಯಾಯಮೂರ್ತಿ ಎಸ್ ಎ ಬೋಬಡೆ ಅವರು, ಪ್ರಸ್ತುತ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವ ನಿರ್ಧಾರಕ್ಕೆ ತಡೆ ನೀಡಿದರೆ ವಿಶ್ವಾಸಮತವನ್ನು ಮುಂದೂಡಿಕೆ ಮಾಡಬೇಕಾಗುತ್ತದೆ. ಈ ಹಿಂದೆ ಸಾಕಷ್ಟು ಬಾರಿ ಕಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವ ಉದಾಹರಣೆಗಳಿವೆ. ಹಿರಿತನ ಎಂದರೆ ವಯಸ್ಸು ಅಲ್ಲ..ಅನುಭವ ಮತ್ತು ಹೆಚ್ಚು ಬಾರಿ ಆಯ್ಕೆಯಾದವರು. ಕೆಲವೊಮ್ಮೆ ಹಿರಿಯ ಶಾಸಕರನ್ನು ಸ್ಪೀಕರ್ ಆಗಿ ನೇಮಕ ಮಾಡಿಲ್ಲ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಇತರೆ ನ್ಯಾಯಮೂರ್ತಿಗಳೂ ಕೂಡ ಬೆಂಬಲ ಸೂಚಿಸಿದರು.
ಅಲ್ಲದೆ ಪ್ರಸ್ತುತ ಸ್ಪೀಕರ್ ಕೆಜಿ ಬೋಪಯ್ಯ ಅವರ ಆಯ್ಕೆಯನ್ನು ತಡೆ ಹಿಡಿಯಬೇಕಾದರೆ, ಅವರಿಗೆ ನೋಟಿಸ್ ನೀಡಬೇಕಾಗುತ್ತದೆ. ಒಂದು ವೇಳೆ ಹಾಗಾದರೆ ವಿಶ್ವಾಸಮತ ಯಾಚನೆಯನ್ನು ಮುಂದೂಡಬೇಕಾಗುತ್ತದೆ. ಆದರೆ ವಿಶ್ವಾಸ ಮತ ಇಂದೇ ನಡೆಯಬೇಕು. ಒಂದು ವೇಳೆ ನಾವು ರಾಜ್ಯಪಾಲರ ಆದೇಶವನ್ನು ಪರಿಶೀಲನೆ ಮಾಡಿದರೆ ನಿನ್ನೆ ನಾವು ನೀಡಿದ್ದ ಆದೇಶದ ವಿರುದ್ಧವಾಗುತ್ತದೆ.  ಅಲ್ಲದೆ ಅವರ ವಾದವನ್ನೂ ಕೂಡ ಆಲಿಸಬೇಕು. ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈಗ ನೀವೇ ಹೇಳಿ ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಮಾಡಿರುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ನಾವು ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕೆ?, ಆದರೆ ಆ ಬಳಿಕ ವಿಶ್ವಾಸಮತ ಯಾಚನೆ ಕಲಾಪ ನಡೆಸೋರು ಯಾರು.. ನಿಮ್ಮ ವಾದದಲ್ಲೇ ಗೊಂದಲವಿದೆ ಎಂದು ನ್ಯಾಯಮೂರ್ತಿ ಬೋಬಡೆ ಅಭಿಪ್ರಾಯಪಟ್ಟರು.
ಒಟ್ಟಾರೆ ಹಂಗಾಮಿ ಸ್ಪೀಕರ್ ನೇಮಕಾತಿ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com