
ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಆದೇಶವನ್ನು ಹಿಂಪಡೆಯಲಾಗಿದೆ.
ಯಡಿಯೂರಪ್ಪನವರು ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದರು. ಅವರಲ್ಲಿ ಇಬ್ಬರು ಅಧಿಕಾರಿಗಳ ಹುದ್ದೆಗಳನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಹಿಂತೆಗೆದುಕೊಂಡು ಅವರನ್ನು ಬೇರೆ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಮತ್ತಿಬ್ಬರು ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಹಿಂಪಡೆದಿದ್ದು ಅವರಿಗೆ ನೂತನ ಹುದ್ದೆಯನ್ನು ಸರ್ಕಾರ ತೋರಿಸಿಲ್ಲ. ಅವರ ವರ್ಗಾವಣೆ ಆದೇಶ ಇನ್ನೂ ಕೈಸೇರಿಲ್ಲ.
ಈ ಮಧ್ಯೆ ಐದನೇ ಅಧಿಕಾರಿ ರಾಮನಗರಕ್ಕೆ ವರ್ಗಾವಣೆಯಾಗಿದ್ದ ಚಿಕ್ಕಮಗಳೂರು ಎಸ್ ಪಿ ಕೆ. ಅಣ್ಣಾಮಲೈ ಅವರ ಹುದ್ದೆಯನ್ನು ರಾಜ್ಯ ಸರ್ಕಾರ ಸ್ಥಗಿತದಲ್ಲಿರಿಸಿದೆ. ಮುಂದಿನ ಸರ್ಕಾರ ರಚನೆಯಾಗಿ ಕಾರ್ಯನಿರ್ವಹಿಸಲು ಆರಂಭಿಸುವವರೆಗೆ ಅಣ್ಣಾಮಲೈ ಅವರ ಹುದ್ದೆಯನ್ನು ಸರ್ಕಾರ ಸ್ಥಗಿತಗೊಳಿಸಲಿದೆ.
ಕಳೆದ ಗುರುವಾರ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಕುಮಾರ್ ಪಾಂಡೆ ಮತ್ತು ಡಿಐಜಿ ಸಂದೀಪ್ ಪಾಟೀಲ್ ಅವರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಇಬ್ಬರೂ ಅಧಿಕಾರಿಗಳು ಒಂದೇ ದಿನ ಅಧಿಕಾರ ವಹಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿ ಚಿಕ್ಕಮಗಳೂರು ಎಸ್ಪಿ ಕೆ. ಅಣ್ಣಾಮಲೈ ಅವರನನು ರಾಮನಗರಕ್ಕೆ, ಬೀದರ್ ಎಸ್ಪಿ ಡಿ. ದೇವರಾಜ್ ಮತ್ತು ಭ್ರಷ್ಟಾಚಾರ ನಿಯಂತ್ರಣ ದಳದ ಎಸ್ಪಿ ಎಸ್ ಗಿರೀಶ್ ಅವರನ್ನು ಬೆಂಗಳೂರು ಕೇಂದ್ರ ಡಿಸಿಪಿ ಮತ್ತು ಬೆಂಗಳೂರು ಈಶಾನ್ಯ ವಲಯ ಡಿಸಿಪಿಗೆ ವರ್ಗಾಯಿಸಲಾಯಿತು.
Advertisement