
ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ರಾಷ್ಚ್ರಮಟ್ಟದಲ್ಲಿ ಜಾರಿಗೆ ಬಂದು ಎಂಟು ವರ್ಷಗಳು ಕಳೆದಿವೆ, ರಾಜ್ಯ ಮಟ್ಟದಲ್ಲಿ 6 ವರ್ಷಗಳಾಗಿವೆ. ಆದರೂ ಕೂಡ ಹಲವು ಪೋಷಕರಿಗೆ ಈ ಒಂದು ಕಾಯ್ದೆ ಇದೆ, ಇದರ ಪ್ರಯೋಜನವೇನು, ಇದನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಇಲ್ಲ.
ಸೆಂಟರ್ ಫಾರ್ ಚೈಲ್ಡ್ ಅಂಡ್ ಲಾ ಆಫ್ ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿವರ್ಸಿಟಿ(ಎನ್ ಎಲ್ ಎಸ್ಐಯು) ನಡೆಸಿರುವ ಅಧ್ಯಯನ ಪ್ರಕಾರ, ಶಿಕ್ಷಣ ಹಕ್ಕು ಕಾಯ್ದೆ ಬಗ್ಗೆ ಶೇಕಡಾ 62.18 ಮಂದಿಗೆ ಮಾತ್ರ ಅರಿವು ಇದೆ. ಬ್ಲಾಕ್ ಶಿಕ್ಷಣ ಅಧಿಕಾರಿಗಳು ಮತ್ತು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರುಗಳಿಗೆ ಈ ಬಗ್ಗೆ ಹೆಚ್ಚು ಅರಿವಿದ್ದರೆ ಸರ್ಕಾರಿ ಶಾಲೆಗಳ ಪೋಷಕರಲ್ಲಿ ಅನೇಕರಿಗೆ ಈ ಕಾಯ್ದೆ ಬಗ್ಗೆ ತಿಳುವಳಿಕೆ ಇಲ್ಲ.
2011ರಿಂದ 2016ರವರೆಗೆ ಶೇಕಡಾ 34.72 ಮಂದಿಗೆ ಶಿಕ್ಷಣ ಹಕ್ಕು ಕಾಯ್ದೆ ಬಗ್ಗೆ ತರಬೇತಿ ನೀಡಲಾಗಿದೆ. ಇವರಿಂದ ಕಾಯ್ದೆ ಬಗ್ಗೆ ಪ್ರತಿಕ್ರಿಯೆಗಳನ್ನು ಕೂಡ ಕೇಳಲಾಯಿತು. ಬಹುತೇಕರು ಉತ್ತಮ ಕಾಯ್ದೆ ಎಂದು ಅಭಿಪ್ರಾಯ ನೀಡಿದ್ದರು.
ಸರ್ಕಾರಿ ಶಾಲೆಗಳ ಶೇಕಡಾ 70.33 ಶೇಕಡಾ ಶಿಕ್ಷಕರು ಶಿಕ್ಷಣ ಹಕ್ಕು ಕಾಯ್ದೆ ಉತ್ತಮವಾಗಿದೆ ಎಂದು ಹೇಳಿದರೆ ಶೇಕಡಾ 40.68ರಷ್ಟು ಖಾಸಗಿ ಶಾಲೆ ಶಿಕ್ಷಕರು ಸಮಾಧಾನಕರ ಎಂದು ಹೇಳಿದ್ದಾರೆ. ಆದರೆ ಈ ಕಾಯ್ದೆ ಬಗ್ಗೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ಪೋಷಕರಿಗೆ ತರಬೇತಿ ನೀಡಿಲ್ಲ ಎಂಬುದು ಇಲ್ಲಿ ಉಲ್ಲೇಖಕಾರಿ ಸಂಗತಿ.
ಇನ್ನೊಂದು ಅಧ್ಯಯನದಿಂದ ತಿಳಿದುಬಂದಿರುವ ಸಂಗತಿಯೆಂದರೆ ರಾಜ್ಯ ಸರ್ಕಾರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರುಗಳಲ್ಲಿ ಶೇಕಡಾ 19 ಮಂದಿಗೆ ಮಾತ್ರ ಆರ್ ಟಿಇ ಕಾಯ್ದೆಯ ಕೆಲವು ವಿಧಿಗಳ ಬಗ್ಗೆ ಅರಿವು ಇಲ್ಲದಿರುವುದು.
ಆರ್ ಟಿಇ ಕಾಯ್ದೆಯಡಿಯಲ್ಲಿನ ನೋ ಡಿಟೆನ್ಷನ್ ಪಾಲಿಸಿ ಪ್ರಕಾರ, ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಸಮೀಕ್ಷೆಗೊಳಪಟ್ಟ ರಾಜ್ಯದ 76 ಸರ್ಕಾರಿ ಶಾಲೆಗಳಲ್ಲಿ ಶೇಕಡಾ 19 ಶಾಲೆಯ ಮುಖ್ಯಸ್ಥರಿಗೆ ಮಾತ್ರ ನೊ ಡಿಟೆನ್ಷನ್ ಪಾಲಿಸಿ ಬಗ್ಗೆ ಅರಿವು ಇದೆ. ಮಕ್ಕಳಿಗೆ ಶಿಕ್ಷೆ ನೀಡಬಾರದು ಎಂಬುದರ ಬಗ್ಗೆ ಹೆಚ್ಚು ಅರಿವು ಶಿಕ್ಷಕರಿಗಿದೆ. ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶೇಕಡಾ 87.10 ಶಿಕ್ಷಕರಿಗೆ ಈ ಬಗ್ಗೆ ಅರಿವು ಇದೆ.
ಶಿಕ್ಷಣ ಹಕ್ಕು ಕಾಯ್ದೆ ಸೂಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎಂದು ಅಧ್ಯಯನ ಕೇಂದ್ರದ ಡಾ.ವಿ.ಪಿ.ನಿರಂಜನ್ ಆರಾಧ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
Advertisement