ಬಹಿರ್ದೆಸೆಗೆ ಬಯಲೇ ಗತಿ; ಇದು ರಾಮನಗರದ ಇರುಳಿಗಾ ಕಾಲೊನಿ ನಿವಾಸಿಗಳ ದುಸ್ಥಿತಿ!

ಅವರಿಬ್ಬರೂ ವಿಕಲಚೇತನ ಸೋದರ-ಸೋದರಿಯರು, ಶ್ರೀಕಾಂತ್ ಮತ್ತು ಸುಮಾ ತಾವು ನೆಲೆಸಿರುವ ...
ಬಹಿರ್ದೆಸೆಗೆ ಪ್ರತಿನಿತ್ಯ ಬಯಲಿಗೆ ತೆವಳುತ್ತಾ ಹೋಗುವ ಶ್ರೀಕಾಂತ್, ಸುಮ ಸೋದರ-ಸೋದರಿ
ಬಹಿರ್ದೆಸೆಗೆ ಪ್ರತಿನಿತ್ಯ ಬಯಲಿಗೆ ತೆವಳುತ್ತಾ ಹೋಗುವ ಶ್ರೀಕಾಂತ್, ಸುಮ ಸೋದರ-ಸೋದರಿ

ರಾಮನಗರ: ಅವರಿಬ್ಬರೂ ವಿಕಲಚೇತನ ಸೋದರ-ಸೋದರಿಯರು, ಶ್ರೀಕಾಂತ್ ಮತ್ತು ಸುಮಾ ತಾವು ನೆಲೆಸಿರುವ ಪುಟ್ಟ ಮನೆಯಿಂದ ಪ್ರತಿನಿತ್ಯ ಬೆಳಗ್ಗೆ 500 ಮೀಟರ್ ಮಣ್ಣಿನ ರಸ್ತೆಯಲ್ಲಿ ತೆವಳುತ್ತಾ ಹೋಗಿ ಬಯಲಿನಲ್ಲಿ ತಮ್ಮ ನಿತ್ಯದ ಬೆಳಗಿನ ಕಾರ್ಯ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಾರೆ.

ಇದು ಇವರಿಬ್ಬರ ಸ್ಥಿತಿ ಮಾತ್ರವಲ್ಲ, ಈ ಕಾಲೊನಿಯಲ್ಲಿ ನೆಲೆಸಿರುವ ಸುಮಾರು 400 ಮಂದಿಯ ಪರಿಸ್ಥಿತಿ. ನಾಳೆ ಉಪ ಚುನಾವಣೆ ನಡೆಯುತ್ತಿರುವ ರಾಮನಗರ ಜಿಲ್ಲೆಯ ಇರುಳಿಗ ಕಾಲೊನಿಯ ದುಸ್ಥಿತಿ. ಕಾಲೊನಿಯಲ್ಲಿ ಸಮುದಾಯ ಶೌಚ ಇದ್ದರೂ ಕೂಡ ಅಲ್ಲಿ ನೀರು ಮತ್ತು ಶುಚಿತ್ವದ ಕೊರತೆಯಿಂದಾಗಿ ಯಾರೂ ಕೂಡ ಅದನ್ನು ಬಳಸುತ್ತಿಲ್ಲ, ಬದಲಿಗೆ ಹತ್ತಿರದ ಬಯಲನ್ನೇ ಆಶ್ರಯಿಸಿದ್ದಾರೆ.

ಈ ವಿಕಲಚೇತನ ಸಹೋದರ-ಸಹೋದರಿಯರ ತಾಯಿ ಗಂಗಮ್ಮ ವಿಧವೆಯಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ''ನನ್ನ ಮಗ ಏಳು ವರ್ಷದವರೆಗೆ
ಬೇರೆ ಮಕ್ಕಳಂತೆಯೇ ಸಹಜವಾಗಿದ್ದ. ನಂತರ ಆತನ ದೇಹದ ಸೊಂಟದ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ತುತ್ತಾಯಿತು. ಅವನಿಗೆ ನಿಲ್ಲಲು ಸಾಧ್ಯವಾಗುವುದಿಲ್ಲ. ನನ್ನ ಮಗಳಿಗೆ ಸಹ ಅದೇ ರೀತಿಯ ಸಮಸ್ಯೆಯಿದೆ. ನಾನು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕೆಲಸ ಮಾಡಿ ಮನೆಗೆ ಬರುತ್ತೇನೆ, ನನ್ನ ಮಕ್ಕಳು ಶೌಚಕ್ಕೆ ಹೋಗಬೇಕೆಂದರೆ ತೆವಳಿಕೊಂಡು ಬಯಲಿಗೆ ಹೋಗಿ ಬರುತ್ತಾರೆ. ಅವರಿಗೆ ಹುಷಾರಿಲ್ಲದಿರುವಾಗ ಕೂಡ ತೆವಳಿಕೊಂಡು ಹೋಗಿ ಬರುತ್ತಾರೆ, ನನಗೆ ಅವರನ್ನು ಹೊತ್ತುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.

ಇರುಳಿಗ ಕಾಲೊನಿ ರಾಮನಗರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಾಬಲ್ಯವಿರುವ ಕ್ಷೇತ್ರ. ಇದೀಗ ನಾಳೆಯ ಉಪ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನಿಂದ ರಾಮನಗರಕ್ಕೆ ಇರುವುದು 50 ಕಿಲೋ ಮೀಟರ್. ಇತ್ತೀಚೆಗೆ ಸ್ವಚ್ಛ ಭಾರತ ಅಭಿಯಾನ ರ್ಯಾಂಕಿಂಗ್ ನಲ್ಲಿ ರಾಮನಗರ ಜಿಲ್ಲೆಗೆ ಶೇಕಡಾ 92 ಬಂದಿತ್ತು.

ಆದರೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಿಂದ ಕೇವಲ 3ಕಿಲೋ ಮೀಟರ್ ದೂರದಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾಮದೇವ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಚ್ಛ ಭಾರತವೆಲ್ಲ ಕೇವಲ ಸರ್ಕಾರಿ ಕಾಗದದಲ್ಲಿರುವ ಬರಹಗಳಷ್ಟೆ. ಇಲ್ಲಿ ಸುಮಾರು 70 ಕುಟುಂಬಗಳ 400 ಜನರು ವಾಸಿಸುತ್ತಿದ್ದಾರೆ. ಸಣ್ಣ ಪುಟ್ಟ ಕಲ್ಲಿನ ಮನೆಗಳು, ಗುಡಿಸಲುಗಳಲ್ಲಿ ನೆಲೆಸಿದ್ದಾರೆ, ಇವೆಲ್ಲರೂ ಬಹಿರ್ದೆಸೆಗೆ ಬಯಲನ್ನೇ ನಂಬಿಕೊಂಡಿದ್ದಾರೆ.

ಇಲ್ಲಿನವರು ಕೂಲಿ ಕಾರ್ಮಿಕರು. ಎರಡು ವರ್ಷಗಳ ಹಿಂದೆ ಹರಿಶ್ಚಂದ್ರ ಗ್ರಾಮ ಪಂಚಾಯತ್ ವತಿಯಿಂದ ಪ್ರತಿ 2 ಮನೆಗೆ ಒಂದರಂತೆ ಸಮುದಾಯ ಶೌಚ ಕಟ್ಟಿಸಲಾಗಿತ್ತು. ಆದರೆ ಅದು ಆರಂಭದಿಂದಲೂ ಬಳಕೆಯಾಗುತ್ತಿಲ್ಲ. ಅಲ್ಲಿ ನೀರಿನ ಸೌಲಭ್ಯವಿಲ್ಲ, ಕಸ ವಿಲೇವಾರಿಗೆ ವ್ಯವಸ್ಥೆಯಿಲ್ಲ, ಹೀಗಾಗಿ ನಾವು ಬಳಸುತ್ತಿಲ್ಲ ಎಂದು ಇಲ್ಲಿನ ನಿವಾಸಿ ಶೀಲಾ ಹೇಳುತ್ತಾರೆ.

ನಾವು ಹಲವು ತಲೆಮಾರುಗಳಿಂದ ಇಲ್ಲಿ ನೆಲೆಸಿದ್ದೇವೆ, ಹಲವು ಸರ್ಕಾರ, ಶಾಸಕರು ಬಂದು ಹೋಗುತ್ತಾರೆ, ಆದರೆ ನಮ್ಮ ಜೀವನಮಟ್ಟ ಸುಧಾರಣೆಯಾಗಿಲ್ಲ. ನಾವು ಇನ್ನೂ ಬಯಲು ಶೌಚವನ್ನೇ ನಂಬಿಕೊಂಡಿದ್ದೇವೆ ಎನ್ನುತ್ತಾರೆ ಹೀರಯ್ಯ.

ಇಲ್ಲೇ ಪಕ್ಕ ಮತ್ತೊಂದು ಶೌಚಾಲಯವಿದೆ. ಅದರಲ್ಲಿ ನೀರಿನ ಸಂಪರ್ಕವಿದೆ. ಆದರೆ ಅದಕ್ಕೆ ಬೀಗ ಹಾಕಿದೆ. ಅದು ಕೇವಲ ಅಧಿಕಾರಿಗಳ ಬಳಕೆಗೆ ಇರುವುದು. ಅಧಿಕಾರಿಗಳು ಬಂದಾಗ ಅದನ್ನು ತೆರೆದು ಬಳಸಿ ಹೋದ ನಂತರ ಬೀಗ ಹಾಕುತ್ತಾರೆ ಎನ್ನುತ್ತಾರೆ ಮತ್ತೊಬ್ಬ ನಿವಾಸಿ.

ನವೆಂಬರ್ 1ರ ವೇಳೆಗೆ ರಾಜ್ಯವನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡುತ್ತೇವೆ ಎಂದು ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದರು. ಈ ಬಗ್ಗೆ ಅವರನ್ನು ಕೇಳಿದಾಗ ನಮ್ಮ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯ ಈ ವರದಿ ಫಲಶ್ರುತಿ ನೀಡುತ್ತದೆಯೇ ಎಂದು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com