4 ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕ ಫಲ: ಮಡಿಕೇರಿ ಕಕ್ಕಟ್ಟು ಕಾಡು ಗ್ರಾಮಕ್ಕೆ ಡಾಂಬರು ರಸ್ತೆ!

ನಾಲ್ಕು ದಶಕಗಳಿಗೂ ಅಧಿಕ ಕಾಲದ ಪ್ರತಿಭಟನೆ ಮತ್ತು 9 ವರ್ಷಗಳ ಕಾನೂನು ಸಮರ ಕೊನೆಗೂ ...
ಕಕ್ಕಟ್ಟು ಕಾಡು ಗ್ರಾಮದ ಕಿರಿದಾದ ರಸ್ತೆ
ಕಕ್ಕಟ್ಟು ಕಾಡು ಗ್ರಾಮದ ಕಿರಿದಾದ ರಸ್ತೆ

ಮಡಿಕೇರಿ: ನಾಲ್ಕು ದಶಕಗಳಿಗೂ ಅಧಿಕ ಕಾಲದ ಪ್ರತಿಭಟನೆ ಮತ್ತು ಸತತ 9 ವರ್ಷಗಳ ಕಾನೂನು ಸಮರ ಕೊನೆಗೂ ಮಡಿಕೇರಿಯ ಕಕ್ಕಟ್ಟು ಕಾಡು ನಿವಾಸಿಗಳಿಗೆ ಫಲ ಕೊಟ್ಟಿದೆ. ಕೊಡಗು ಜಿಲ್ಲೆಯ ಸಿದ್ದಾಪುರ ಬಳಿಯ ಸುಮಾರು 100 ಗ್ರಾಮಸ್ಥರು ಡಾಂಬರು ರಸ್ತೆಯನ್ನು ಕಂಡಿದ್ದಾರೆ.

ಕಕ್ಕಟ್ಟು ಕಾಡು ಪ್ರದೇಶದಲ್ಲಿ ಸುಮಾರು 35 ಕುಟುಂಬಗಳು ವಾಸವಾಗಿದ್ದಾರೆ. ಹೆಸರಿಗೆ ಸರಿಯಾಗಿ ಇದು ಕಾಡು ಪ್ರದೇಶ, ವಾಹನಗಳು ಸಂಚಾರಕ್ಕೆ ಸಿಗಬೇಕೆಂದರೆ ಅದರ ಮಧ್ಯೆ ಕಿರಿದಾದ ಮಣ್ಣಿನ ರಸ್ತೆಯಲ್ಲಿ ಒಂದು ಕಿಲೋ ಮೀಟರ್ ಗೂ ಅಧಿಕ ನಡೆದುಕೊಂಡು ಹೋಗಬೇಕು. ಒಂದು ಕಿಲೋ ಮೀಟರ್ ನಷ್ಟು ನಡೆದರೂ ಕೂಡ ಕೆಲವೊಮ್ಮೆ ವಾಹನಗಳು ಸಿಗದೆ ಸಿದ್ದಾಪುರದವರೆಗೆ 5 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು ಎನ್ನುತ್ತಾರೆ ಇಲ್ಲಿನ ಗ್ರಾಮ ಪಂಚಾಯತ್ ನಿವಾಸಿ ರೆಜಿತ್ ಕುಮಾರ್.

13 ವರ್ಷಗಳ ಹಿಂದೆ ಇಲ್ಲಿ ಗರ್ಭಿಣಿ ಶಾಂತಾ ಎಂಬುವವರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಅಸುನೀಗಿದ್ದರು. 9 ವರ್ಷಗಳ ಹಿಂದೆ ಧನ್ಯ ಎಂಬ ಶಾಲಾ ವಿದ್ಯಾರ್ಥಿನಿ ಆಕಸ್ಮಿಕವಾಗಿ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದಾಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಳು. ಈ ಎರಡು ಘಟನೆಗಳಾದ ನಂತರ ಗ್ರಾಮಸ್ಥರು ತಮಗೆ ಸಂಪರ್ಕಕ್ಕೆ ರಸ್ತೆ ಒದಗಿಸಿಕೊಡಿ ಎಂದು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರು. 9 ವರ್ಷಗಳ ವಿಚಾರಣೆ ಬಳಿಕ ವಿರಾಜಪೇಟೆ ನ್ಯಾಯಾಲಯ ಗ್ರಾಮಸ್ಥರ ಪರವಾಗಿ ತೀರ್ಪು ನೀಡಿದೆ.

ಇದೀಗ ರಸ್ತೆ ನಿರ್ಮಾಣಕ್ಕೆ ಇದೇ 12ರಂದು ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ಸಮಯಕ್ಕೆ ಸರಿಯಾಗಿ ನಡೆಯದಿದ್ದರೆ ನಮಗೆ ರಸ್ತೆ ಆಗುವುದಿಲ್ಲ, ಮತ್ತೆ ನಾವು ಪ್ರತಿಭಟನೆ ನಡೆಸುತ್ತೇವೆ ಎನ್ನುತ್ತಾರೆ.

ಈ ಮಧ್ಯೆ, ಗುಹ್ಯಾ ಗ್ರಾಮ ಪಂಚಾಯತ್ ರಸ್ತೆ ನಿರ್ಮಾಣಕ್ಕೆ ಬೆಂಬಲ ನೀಡಿದ್ದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ಜಿಲ್ಲಾಧಿಕಾರಿ ಶ್ರೀವಿದ್ಯಾ ಸಹಾಯಕ ಆಯುಕ್ತ ಜವರೇಗೌಡ ಅವರಿಗೆ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ನಂತರ ಜವರೇಗೌಡ, ಈಗಿರುವ ರಸ್ತೆಯನ್ನು ವಿಸ್ತರಿಸಿ ಡಾಮರು ರಸ್ತೆ ನಿರ್ಮಿಸಲಾಗುವುದು ಎಂದಿದ್ದಾರೆ. ಕಂದಾಯ ಇಲಾಖೆ ಇನ್ಸ್ ಪೆಕ್ಟರ್ ಮಿಲು ಅವರಿಗೆ ಸಮೀಕ್ಷೆ ನಡೆಸಿ ಸದ್ಯದಲ್ಲಿಯೇ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com