ಆಂಬಿಡೆಂಟ್ ಲಂಚ ಪ್ರಕರಣ: ಜನಾರ್ಧನ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಆಂಬಿಡೆಂಟ್ ಪ್ರಕರಣದಲ್ಲಿ ಆರೋಪಿಯಾಗಿರುವ ಗಾಲಿ ಜನಾರ್ಧನ ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ (ನವೆಂಬರ್ ೧೨) ಮುಂದೂಡಿಕೆಯಾಗಿದೆ.
ಜನಾರ್ಧನ ರೆಡ್ಡಿ
ಜನಾರ್ಧನ ರೆಡ್ಡಿ
ಬೆಂಗಳೂರು: ಆಂಬಿಡೆಂಟ್ ಪ್ರಕರಣದಲ್ಲಿ ಆರೋಪಿಯಾಗಿರುವ ಗಾಲಿ ಜನಾರ್ಧನ ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ (ನವೆಂಬರ್ 12) ಮುಂದೂಡಿಕೆಯಾಗಿದೆ.
ಬಂಧನ ಭೀತಿ ಎದುರಿಸುತ್ತಿರುವ ಜನಾರ್ಧನ ರೆಡ್ಡಿ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದು ಇದಾಗಲೇ ಅವರ ಬೆಂಗಳೂರು, ಬಳ್ಳಾರಿ ನಿವಾಸದ ಮೇಲೆ ಸಿಸಿಬಿ ಪೋಲೀಸರು ದಾಳಿ ನಡೆಸಿದ್ದಾರೆ. 
ಶುಕ್ರವಾರ ಬೆಂಗಳೂರು 61ನೇ ಸಿಟಿ ಸಿವಿಲ್ ಕೋರ್ಟ್  ನಲ್ಲಿ ರೆಡ್ಡಿ ಪರ ವಕೀಲರಾದ ಸಿ.ಎಚ್.ಹನುಮಂತರಾಯ ಜನಾರ್ಧನ ರೆಡ್ಡಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಸೀಮವಾರಕ್ಕೆ ಮುಂದೂಡಿದ್ದಲ್ಲದೆ ಸಿಸಿಬಿಗೆ ಆಕ್ಷೇಪಣೆ ಸಲ್ಲಿಕೆಗೆ ಸಹ ಅನುಮತಿ ನೀಡಿದೆ.
ಇದರ ನಡುವೆ ಭಾನುವಾರ (ನವೆಂಬರ್ 11) ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ರೆಡ್ಡಿಗೆ ನೋಟೀಸ್ ಜಾರಿ ಮಾಡಿದೆ ಎನ್ನಲಾಗಿದೆ.ಈ ಕುರಿತಂತೆ ಪ್ರಶ್ನಿಸಿದ ನ್ಯಾಯಾಧೀಶರು ಸಿಸಿಬಿ ವಿಚಾರಣೆಗೆ ರೆಡ್ಡಿ ಗೈರಾದದ್ದೇಕೆ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಯಿಸಿದ ವಕೀಲರು ರೆಡ್ಡಿಗೆ ಬಂಧನ ಭೀತಿ ಇದೆ. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕರೆ ಭಾನುವಾರವೇ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದರು.
ಆದರೆ ಜನಾರ್ಧನ ರೆಡ್ಡಿಯನ್ನು ಬಂಧಿಸಲು ತಕ್ಕ ಕಾರಣಗಳಾವುದೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಹೀಗಾಗಿ ಅವರು ಬಂಧನ ಭೀತಿಗೊಳಗಾಗಬೇಕಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದೇ ವೇಳೆ ರೆಡ್ಡಿ ಪರ ವಕೀಲರು ತಾವು ಈ ಹಿಂದೆ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ತಾವೇ ಹಿಂಪಡೆದಿದ್ದಾರೆ. ನಿರೀಕ್ಷಣಾ ಜ್ಮೀನು ಅರ್ಜಿಯನ್ನು ಮಾತ್ರ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com