ಆ್ಯಂಬಿಡೆಂಟ್ ವಂಚನೆ ಪ್ರಕರಣ: ರೆಡ್ಡಿ ಜಾಮೀನು ಅರ್ಜಿ ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ, ಸಿಸಿಬಿಗೆ ತೀವ್ರ ತರಾಟೆ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ 1ನೇ ಎಸಿಎಂಎಂ ನ್ಯಾಯಾಲಯ, ವಿಚಾರಣೆ ಮುಕ್ತಾಯಗೊಳಿಸಿದ್ದು, ನಾಳೆಗೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ...
ಜನಾರ್ಧನ ರೆಡ್ಡಿ
ಜನಾರ್ಧನ ರೆಡ್ಡಿ
ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ 1ನೇ ಎಸಿಎಂಎಂ ನ್ಯಾಯಾಲಯ, ವಿಚಾರಣೆ ಮುಕ್ತಾಯಗೊಳಿಸಿದ್ದು, ನಾಳೆಗೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ. ಇದೇ ವೇಳೆ ಸಿಸಿಬಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು 1ನೇ ಎಸಿಎಂಎಂ ಕೋರ್ಟ್ ನ್ಯಾ.ಜಗದೀಶ್ ಅವರು ನಡೆಸಿದರು. ವಿಚಾರಣೆ ವೇಳೆ ವಾದ ಮಂಡಿಸಿದ ರೆಡ್ಡಿ ಪರ ವಕೀಲ ಸಿ.ಹೆಚ್.ಹನುಮಂತರಾಯ ಅವರು, ಜನಾರ್ಧನ ರೆಡ್ಡಿಗೂ ಚಿನ್ನಕ್ಕೂ ಸಂಬಂಧವಿಲ್ಲ. ರಿಮೈಂಡ್ ಅಪ್ಲಿಕೇಶನ್ ನಲ್ಲಿ ರೆಡ್ಡಿಯವರ ಹೆಸರು ಬಳಕೆ ಮಾಡಿಲ್ಲ. ವಿಚಾರಣೆಗೆ ಕರೆಯಿಸಿ ಬರೋಬ್ಬರಿ 12 ಗಂಟೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕವೂ ಅಲ್ಲಿಯೇ ಏಕೆ ಉಳಿಸಿಕೊಂಡರು? ಎಂದು ಪ್ರಶ್ನಿಸಿದ್ದಾರೆ. 
ಅಲಿಖಾನ್ ರಿಮೈಂಡ್ ಅಪ್ಲಿಕೇಶನ್ ನಲ್ಲಿ ಆತನ ಹೆಸರಿತ್ತು. ಆದರೆ, ರೆಡ್ಡಿಯವರ ಹೆಸರಿರಲಿಲ್ಲ. ರೆಡ್ಡಿಯವರನ್ನು ಸುಖಾಸುಮ್ಮನೆ ಕರೆಸಿಕೊಂಡಿದ್ದಾರೆ. 5ನೇ ಆರೋಪಿ ಅಲಿಖಾನ್ 4ನೇ ಆರೋಪಿ ರಮೇಶ್ ನಿಂದ ಚಿನ್ನ ಪಡೆದಿದ್ದಾನೆಂದು ಹೇಳಲಾಗುತ್ತಿದೆ. ಹೀಗಾಗಿ ಅಲಿಖಾನ್ ಚಿನ್ನ ಕೊಡಬೇಕೇ ವಿನಃ 6ನೇ ಆರೋಪಿ ರೆಡ್ಡಿಯಲ್ಲ. ರೆಡ್ಡಿಗೂ ಚಿನ್ನಕ್ಕೂ ಸಂಬಂಧವಿಲ್ಲ. ಆದರೆ, ಪ್ರಕರಣದ 1ನೇ ಆರೋಪಿ ಫರೀದ್'ಗೆ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ದೂರಿಗೆ ಸಂಬಂಧವೇ ಇಲ್ಲದ 6ನೇ ಆರೋಪಿ ರೆಡ್ಡಿಯವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದರು. 
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಸಿಸಿಬಿ ಪರ ವಕೀಲ ವೆಂಕಟಗಿರಿಯವರು, ಪ್ರಕರಣದಲ್ಲಿ ರೂ.600-700 ಕೋಟಿ ವಂಚನೆಯಾಗಿದೆ. ಪ್ರಕರಣದಲ್ಲಿ ರೆಡ್ಡಿ ರೂ.20 ಕೋಟಿ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಜನವರಿಯಿಂದ ಈ ಕುರಿತು ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು. 
ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ರೆಡ್ಡಿ ಮತ್ತು ಕಂಪನಿಗೆ ನೇರ ಸಂಬಂಧ ಇದೆಯೇ? ಹಣವನ್ನು ರೆಡ್ಡಿ ಯಾರಾದರೂ ಕೊಟ್ಟಿದ್ದಾರಾ? ನೇರವಾಗಿ ಯಾವುದಾದರೂ ನಂಟು ಇದೆಯೇ? ಸುಮ್ಮನೆ ಆರೋಪ ಮಾಡಬೇಕೆಂದು ಮಾಡಬೇಡಿ. ನೇರವಾದ ಸಂಬಂಧ ಇರೋದರ ಬಗ್ಗೆ ಮಾಹಿತಿ ನೀಡಿ. ಸರಿಯಾದ ಮಾಹಿತಿ ಇಲ್ಲದೆಯೇ ಬಂಧನ ಮಾಡಲಾಗಿದೆ. ಹಣ ಕಳೆದುಕೊಂಡವರು ಯಾರು ರೆಡ್ಡಿಗೆ ಕೊಟ್ಟಿರುವುದಾಗಿ ಹೇಳಿದ್ದಾರಾ? ದಾಖಲಾಗಿರುವ ದೂರು ಒಂದಾದರೆ, ತನಿಖೆಯೇ ಮತ್ತೊಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com