ಅಕ್ರಮ ಪ್ರಕರಣ ಬೆಳಕಿಗೆ ತಂದ ಸಿಬ್ಬಂದಿ ಸೇವೆಯಿಂದಲೇ ವಜಾ

ಅಕ್ರಮ ವಂಚನೆ ಬೆಳಕಿಗೆ ತಂದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ ಪ್ರಕರಣ ...
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ

ರಾಯಚೂರು: ಅಕ್ರಮ ವಂಚನೆ ಬೆಳಕಿಗೆ ತಂದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ ಪ್ರಕರಣ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ರಿಮ್ಸ್) ನಡೆದಿದೆ.

ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಅನಿಲ್ ಕುಮಾರ್ ಈ ಸಂಬಂಧ ದೂರು ನೀಡಿದ್ದು, ಆಸ್ಪತ್ರೆಯ ರಿಸೆಪ್ಷನ್ ನಲ್ಲಿ ಅಕೌಂಟ್ಸ್ ನಿರ್ವಹಿಸುತ್ತಿರುವ ಸಿಬ್ಬಂದಿ, ಕೌಂಟರ್ ನಲ್ಲಿ ತೆಗೆದುಕೊಂಡ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದೆ ವಂಚಿಸಿದ್ದಾರೆ ಅಲ್ಲದೆ ಬ್ಯಾಲೆನ್ಸ್ ಶೀಟ್ ನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ಜುಲೈ 2ರಂದು ಅನಿಲ್ ಕುಮಾರ್ ವೈದ್ಯಕೀಯ ಸೂಪರಿಂಟೆಂಡೆಂಟ್ ಅವರಿಗೆ ಅಕ್ರಮ ವಂಚನೆ ಕುರಿತು ಪತ್ರ ಬರೆದಿದ್ದು ಅದರ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಪತ್ರಕ್ಕೆ 22 ಮಂದಿ ಬೇರೆ ಸಿಬ್ಬಂದಿ ಸಹಿ ಹಾಕಿದ್ದಾರೆ. ಆದರೂ ಜುಲೈ 7ರಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಹೊರಗುತ್ತಿಗೆ ನೀಡಿದ ಸಂಸ್ಥೆಯಾದ ಪುರೋಹಿತ್ ಕಂಪ್ಯೂಟರ್ಸ್ ಅಂಡ್ ಐಟಿ ಸರ್ವಿಸ್ ಗೆ ಅನಿಲ್ ಕುಮಾರ್ ನನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸು ಮಾಡಿತ್ತು. ಆ ಪತ್ರ ಕೂಡ ಪತ್ರಿಕೆಗೆ ಲಭ್ಯವಾಗಿದೆ. ಜುಲೈ 18ರಂದು ಸಂಸ್ಥೆ ಆತನನ್ನು ಸೇವೆಯಿಂದ ವಜಾಗೊಳಿಸಿತ್ತು.

ರಿಮ್ಸ್ ನ ನಿರ್ದೇಶಕ ಹಾಗೂ ಡೀನ್ ಕವಿತಾ ಪಾಟೀಲ್ ಅವರು ಹಣ ಪಡೆದಿದ್ದರು ಎಂದು ಕುಮಾರ್ ಆರೋಪಿಸಿದ್ದರು. ಕೆಲಸದಿಂದ ವಜಾಗೊಂಡ ಅನಿಲ್ ಕುಮಾರ್ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿದ ನಂತರ ಅವರು ಆತನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕವಿತಾ ಪಾಟೀಲ್ ಗೆ ಸೂಚಿಸಿದ್ದರು.  ಈ ಎರಡೂ ಪತ್ರಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ.

ರಿಮ್ಸ್ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರಕ್ಕೆ ಆಕ್ಷೇಪಣೆ ಸಲ್ಲಿಸುವ ಹಕ್ಕು ಅನಿಲ್ ಕುಮಾರ್ ಅವರಿಗೆ ಇಲ್ಲ ಎಂದು ಪಾಟೀಲ್ ಹೇಳಿದ್ದಾರೆ. ಅನಿಲ್ ಕುಮಾರ್ ಬೇರೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದ, ಈ ಹಿನ್ನಲೆಯಲ್ಲಿ ಅವನನ್ನು ಸೇವೆಯಿಂದ ವಜಾಗೊಳಿಸಲಾಯಿತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com