
ಬೆಂಗಳೂರು: ಬರಪೀಡಿತ ಜಿಲ್ಲೆಗಳಲ್ಲಿ ಶನಿವಾರದಿಂದ ಸೋಮವಾರದವರೆಗೂ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದ್ದು, ಬರ ಪರಿಸ್ಥಿತಿ ಹಾಗೂ ಬೆಳೆನಷ್ಟದ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ನೇತೃತ್ವದಲ್ಲಿನ ತಂಡ ರಾಯಚೂರು, ಯಾದಗಿರಿ, ಕೋಲಾರ, ಮತ್ತಿತರ ಜಿಲ್ಲೆಗಳ ಆಯ್ದ ಗ್ರಾಮಗಳಿಗೆ ಪ್ರವಾಸ ಕೈಗೊಳ್ಳಲಿದ್ದು, ಪರಿಸ್ಥಿತಿ ಅವಲೋಕನ ನಡೆಸಲಿದೆ ಎಂದು ಹೇಳಿದರು.
ಪ್ರವಾಸದ ಬಳಿಕ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಅಧ್ಯಯನ ತಂಡ ಚರ್ಚೆ ನಡೆಸಲಿದೆ. ಈ ತಂಡ ನೀಡುವ ವರದಿ ಆಧಾರದ ಮೇಲೆ ಕೇಂದ್ರಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಬರ ನಿರ್ವಹಣೆಗಾಗಿ ಕೇಂದ್ರಸರ್ಕಾರದಿಂದ ಪರಿಹಾರ ಕೋರಿ ಒಂದು ತಿಂಗಳ ಹಿಂದೆ ರಾಜ್ಯಸರ್ಕಾರ ಸಲ್ಲಿಸಿದ ಮನವಿ ಕುರಿತಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೇಂದ್ರದಿಂದ ಯಾವುದೇ ಹಣ ಬಿಡುಗಡೆ ಆಗಿಲ್ಲ ಎಂದರು.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೂ 50 ಲಕ್ಷ ರೂ. ಹಣವನ್ನು ರಾಜ್ಯಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.
Advertisement