ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರ ಏರಿದ ಕೊಡಗಿನ ಯುವತಿ ಭವಾನಿ

ರಷ್ಯಾದ ಅತಿ ಎತ್ತರದ ಶಿಖರವನ್ನು ಹತ್ತುವ ಮೂಲಕ ನಾಪೊಕ್ಲು ಎಂಬ ಸಣ್ಣ ಪಟ್ಟಣದ ಯುವತಿ ಭವಾನಿ ...
ರಷ್ಯಾದ ಶಿಖರವೇರಿದ ಕೊಡಗಿನ ಭವಾನಿ
ರಷ್ಯಾದ ಶಿಖರವೇರಿದ ಕೊಡಗಿನ ಭವಾನಿ

ಮಡಿಕೇರಿ: ರಷ್ಯಾದ ಅತಿ ಎತ್ತರದ ಶಿಖರವನ್ನು ಹತ್ತುವ ಮೂಲಕ ನಾಪೊಕ್ಲು ಎಂಬ ಸಣ್ಣ ಪಟ್ಟಣದ ಯುವತಿ ಭವಾನಿ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

 ಬೇರೆ ದೇಶಗಳ ಮೂವರು ಪರ್ವತಾರೋಹಿಗಳೊಂದಿಗೆ ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರಕ್ಕೆ  8 ಗಂಟೆಗಳಲ್ಲಿ 5 ಸಾವಿರದ 642 ಮೀಟರ್ ಎತ್ತರದ ಶಿಖರವನ್ನು ಭವಾನಿ ಹತ್ತಿದ್ದಾರೆ. ಅಲ್ಲಿ ಭಾರತದ  ಧ್ವಜವನ್ನು ಹಾರಿಸಿ ಬಂದಿದ್ದಾರೆ.

ತೆಕ್ಕಾಡ ನಂಜುಂಡ ಸ್ವಾಮಿ ಮತ್ತು ಪಾರ್ವತಿ ದಂಪತಿಯ ಪುತ್ರಿಯಾಗಿರುವ ಭವಾನಿ ನಾಪೊಕ್ಲುವಿನ ಪೆರೂರು ಗ್ರಾಮದವರು. ಕೊಡಗು ಜಿಲ್ಲೆಯಲ್ಲಿಯೇ ಶಾಲಾ ಶಿಕ್ಷಣ ಪೂರೈಸಿ ನಂತರ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿ ಗಳಿಸಿದರು. ಓದಿನ ಜೊತೆಗೆ ಪರ್ವತಾರೋಹಣ ಕೋರ್ಸ್ ನ್ನು ಕೂಡ ಮಾಡಿದ್ದರು. ನಂತರ ಹಿಮಾಲಯನ್ ಪರ್ವತಾರೋಹಣ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಗೆ ಸೇರಿಕೊಂಡರು.

ಪ್ರಕೃತಿ ಪ್ರಿಯೆ ಮತ್ತು ಪರ್ವತಾರೋಹಿಣಿಯಾಗಿರುವ ಭವಾನಿ ಯಾವಾಗಲೂ ಅತ್ಯಂತ ಎತ್ತರದ ಶಿಖರ ಹತ್ತುವ ಕನಸು ಕಾಣುತ್ತಿದ್ದರು. ಯುರೋಪ್ ಖಂಡದಲ್ಲಿ 10ನೇ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎಲ್ಬ್ರಸ್ ಹತ್ತುವ ಮೂಲಕ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.

ಭವಾನಿ ಜೊತೆ ಪರ್ವತ ಏರಿದ ಉಳಿದ ಮೂವರು ಶಿಖರಾರೋಹಿಗಳು ಮೆಕ್ಸಿಕೊ, ಫ್ರಾನ್ಸ್ ಮತ್ತು ರೊಮಾನಿಯಾದ ಪುರುಷರು ಎನ್ನುವುದು ವಿಶೇಷ. ಕಳೆದ ಅಕ್ಟೋಬರ್ 18ರಂದು ಮಧ್ಯರಾತ್ರಿ ತಮ್ಮ ಯಾತ್ರೆಯನ್ನು ಆರಂಭಿಸಿ ಮರುದಿನ ಬೆಳಗ್ಗೆ 9.30ಕ್ಕೆ ಉಳಿದ ಮೂವರನ್ನು ಹಿಂದಿಕ್ಕಿ ಭವಾನಿ ಮೊದಲಿಗೆ ಶಿಖರ ತಲುಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com