ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದಲೇ ಹಣ

ನಗರದಲ್ಲಿ 65 ಕಿಲೋ ಮೀಟರ್ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಮಿಯನ್ನು ಸ್ವಾಧೀನಪಡಿಸಲು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ 65 ಕಿಲೋ ಮೀಟರ್ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಮಿಯನ್ನು ಸ್ವಾಧೀನಪಡಿಸಲು ರಾಜ್ಯ ಸರ್ಕಾರದ ಖಜಾನೆಯಿಂದ 4 ಸಾವಿರದ 500 ಕೋಟಿ ರೂಪಾಯಿ ನೀಡಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ, ನೈಸ್ ರಸ್ತೆ ನಿರ್ಮಾಣ ನಿಲ್ಲಿಸಿದಲ್ಲಿಂದ ಫೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಿಸಲಾಗುವುದು. ಭೂಮಿಯನ್ನು ಸ್ವಾಧೀನ ಪಡೆಯುವುದೇ ಬಹುದೊಡ್ಡ ಸವಾಲಾಗಿತ್ತು. ಕೇಂದ್ರ ಸರ್ಕಾರದ ನಗರಮ್ ಮಾಲಾ ಯೋಜನೆ ಕೂಡ ಸಹಾಯವಾಗಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಭೂಮಿಯನ್ನು ಕಳೆದುಕೊಂಡವರಿಗೆ ಪರಿಹಾರ ನೀಡಿ ಯೋಜನೆಯನ್ನು ಆರಂಭಿಸಲಿದೆ ಎಂದರು.

ಅಷ್ಟಪಥದ ರಸ್ತೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದೇ ಎಂದು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದರು.

ಫೆರಿಫೆರಲ್ ರಿಂಗ್ ರಸ್ತೆಗೆ ಸುಮಾರು 5,800 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು 2007ರಲ್ಲಿ ಹೇಳಲಾಗಿತ್ತು. ನಂತರ ಅದು 11,950 ಕೋಟಿ ರೂಪಾಯಿ ವೆಚ್ಚಕ್ಕೆ 2014ರಲ್ಲಿ ಏರಿಕೆಯಾಯಿತು. ಇಂದು ಸುಮಾರು 17 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.

ಫೆರಿಫೆರಲ್ ರಿಂಗ್ ರಸ್ತೆಗೆ 67 ಗ್ರಾಮಗಳಲ್ಲಿ 1,810 ಎಕರೆ ಭೂಮಿ ಅಗತ್ಯವಿದ್ದು ಭೂಮಿಯನ್ನು ಪಡೆಯಲು ಸುಮಾರು 8,100 ಕೋಟಿ ರೂಪಾಯಿ ಅಗತ್ಯವಿದೆ. 2013ರ ಭೂ ಸ್ವಾಧೀನ ಕಾಯ್ದೆಯಿಂದಾಗಿ ವೆಚ್ಚ ಅಧಿಕವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com