ಮಕ್ಕಳು ಸುದೀರ್ಘ ರಜೆ ಹಾಕಿದರೆ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿ: ಶಾಲಾ ಶಿಕ್ಷಕರಿಗೆ ಆದೇಶ

ಕೆಲವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ದಿನಗಟ್ಟಲೆ ಶಾಲೆಗೆ ಬರದೆ ಇರುತ್ತಾರೆ, ವಾರಗಟ್ಟಲೆ ಕಳೆದು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೆಲವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ದಿನಗಟ್ಟಲೆ ಶಾಲೆಗೆ ಬರದೆ ಇರುತ್ತಾರೆ, ವಾರಗಟ್ಟಲೆ ಕಳೆದು ಶಾಲೆಗೆ ಬಂದ ಮೇಲೆ ಏಕೆ ಬರಲಿಲ್ಲ ಎಂದು ಟೀಚರ್ ಕೇಳಿದರೆ ಏನೋ ಒಂದು ಸಬೂಬು ಹೇಳುತ್ತಾರೆ. ಅದನ್ನು ಬಹುತೇಕ ಸಂದರ್ಭಗಳಲ್ಲಿ ಶಿಕ್ಷಕರು ನಂಬುತ್ತಾರೆ ಕೂಡ. ಆದರೆ ಇನ್ನು ಮುಂದೆ ಹಾಗೆ ಸುಳ್ಳು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ.

ನಮ್ಮ ರಾಜ್ಯ ಸೇರಿದಂತೆ ದೇಶದ ಕೆಲವು ಕಡೆಗಳಲ್ಲಿ ಈಗಲೂ ಕೂಡ ಬಾಲ್ಯ ವಿವಾಹ ಚಾಲ್ತಿಯಲ್ಲಿದೆ. ಇದನ್ನು ತಡೆಗಟ್ಟಲು ಶಾಲೆಯಿಂದಲೇ ನಡೆಯುವ ನೂತನ ಅಭಿಯಾನವನ್ನು ಸರ್ವ ಶಿಕ್ಷ ಅಭಿಯಾನ ಕೈಗೊಂಡಿದೆ.

ಯಾವುದೇ ಮಗು ಮೊದಲೇ ಹೇಳದೆ ದಿನಗಟ್ಟಲೆ, ವಾರಗಟ್ಟಲೆ ಶಾಲೆಗೆ ಬಾರದಿದ್ದರೆ ಆಯಾ ಶಾಲೆಯ ಶಿಕ್ಷಕ-ಶಿಕ್ಷಕಿಯರು ಮಕ್ಕಳ ಅಭಿವೃದ್ಧಿ ಸಮಿತಿಗೆ ತಿಳಿಸಬೇಕು. ಒಂದು ವೇಳೆ ಶಿಕ್ಷಕರು ಹೇಳದಿದ್ದರೆ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಹಲವು ಪ್ರಕರಣಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬಾಲ್ಯ ವಿವಾಹವಾಗುತ್ತಿದ್ದರೆ ಶಿಕ್ಷಕರಿಗೆ ಗೊತ್ತಾಗುತ್ತದೆ. ಆದರೆ ಈ ಬಗ್ಗೆ ನಿರ್ಲಕ್ಷತನದಿಂದಲೋ ಅಥವಾ ಅಸಹಾಯಕತೆಯಿಂದಲೋ ಹೇಳುವುದಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದರೆ ಅವರು ಸಮಿತಿಗೆ ತಿಳಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಬಹುದು ಎಂಬುದು ಇದರ ಉದ್ದೇಶ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಸರ್ವ ಶಿಕ್ಷ ಅಭಿಯಾನ ಯೋಜನಾ ನಿರ್ದೇಶಕರು ಈ ಬಗ್ಗೆ ಜ್ಞಾಪನೆ ಹೊರಡಿಸಿದ್ದು ಅದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಮಕ್ಕಳ ಕಲ್ಯಾಣ ಸಮಿತಿಗೆ ಬಾಲ್ಯ ವಿವಾಹಗಳ ಬಗ್ಗೆ ಮತ್ತು ಮಕ್ಕಳು ಕಾಣೆಯಾದ ಬಗ್ಗೆ ಹಲವು ದೂರುಗಳು ಬರುತ್ತಿರುತ್ತವೆ.
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ಏಕೆ ಕಡಿಮೆಯಾಗುತ್ತಿದ್ದಾರೆ ಎಂಬ ಬಗ್ಗೆ ಶಾಲಾ ವ್ಯವಸ್ಥಾಪಕ ಮಂಡಳಿ ತನಿಖೆ ನಡೆಸುತ್ತದೆ, ಆದರೆ ಮುಂದಿನ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಅದು ಮಕ್ಕಳ ಕಲ್ಯಾಣ ಸಮಿತಿಗೆ ತಲುಪುವಾಗ ತಡವಾಗುತ್ತದೆ ಎಂದರು.

ಈ ಹೊಸ ಅಭಿಯಾನದಿಂದ ಮಕ್ಕಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಸಿಗುತ್ತದೆ. ಮಕ್ಕಳು ದಿನಗಟ್ಟಲೆ ಶಾಲೆಗೆ ಬಾರದಿದ್ದರೆ ಕೇವಲ ಮಕ್ಕಳ ಕಲ್ಯಾಣ ಸಮಿತಿಗೆ ಮಾತ್ರವಲ್ಲದೆ ನಿಲಯ ಶೈಕ್ಷಣಿಕ ಅಧಿಕಾರಿ ಮತ್ತು ಜಿಲ್ಲಾ ಉಪ ನಿರ್ದೇಶಕರಿಗೆ ಸಹ ತಿಳಿಸಬೇಕು.

ಈ ಬಗ್ಗೆ ಮಾತನಾಡಿದ ಮಕ್ಕಳ ಸಮಿತಿ ಮಾಜಿ ಸದಸ್ಯ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮ, ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿಯೇ ಇದೆ. ಒಂದು ಮಗು 10-15 ದಿನಗಳ ಕಾಲ ಶಾಲೆಗೆ ಬಾರದಿದ್ದರೆ ಏಕೆ ಬಾರಲಿಲ್ಲ ಎಂದು ವಿಚಾರಿಸಬೇಕು, ಮಕ್ಕಳ ಬಗ್ಗೆ ಮಾಹಿತಿ ಇಲ್ಲದಿದ್ದರೆ, ಸಂಶಯ ತೋರಿಬಂದರೆ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಬೇಕು ಎನ್ನುತ್ತಾರೆ.

ಕಳೆದ ವರ್ಷ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯಂತೆ ರಾಜ್ಯದಲ್ಲಿ ಶೇಕಡಾ 23.2ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು, ಹೈದರಾಬಾದ್ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com