ಬೆಂಗಳೂರು: 8ನೇ ತರಗತಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸೈಕಲ್ ವಿತರಿಸುವುದನ್ನು ನಿಲ್ಲಿಸಬೇಕೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ವರ್ಷ ವಿತರಣೆಯಾದ ಸೈಕಲ್ ಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕೆಲವರು ಆಕ್ಷೇಪ ಮತ್ತು ಕಳವಳ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಳೆದ ಮಂಗಳವಾರ ಮುಖ್ಯಮಂತ್ರಿಗಳು ಉಪ ಆಯುಕ್ತರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಿದ್ದ ಇಲಾಖೆ ಸೈಕಲ್ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿದೆ. ಇಲಾಖೆ ಸೈಕಲ್ ಮತ್ತು ಹೊಲಿಗೆ ಯಂತ್ರ ಕೇಂದ್ರ ಲುಧಿಯಾನಾದಿಂದ ಗುಣಮಟ್ಟದ ತಪಾಸಣೆ ವರದಿ ತರಿಸಿಕೊಂಡಿದೆ.
ಸಾಮಾನ್ಯವಾಗಿ ಸೈಕಲ್ ನ್ನು ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ತಲುಪಿಸುವ ಮುನ್ನ ಮೂರು ಹಂತಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ಮೊದಲು ಉತ್ಪಾದನೆ ಸಮಯದಲ್ಲಿ 100 ಸೈಕಲ್ ಗಳನ್ನು, ಎರಡನೆಯದ್ದು ಕ್ರ್ಯಾಶ್ ಪರೀಕ್ಷೆ ಎಂದು 2500 ಸೈಕಲ್ ಗಳಲ್ಲಿ ಒಂದು ಮೂರನೆ ಹಂತದಲ್ಲಿ ವಿತರಣೆ ಸಮಯದಲ್ಲಿ 40 ಸೈಕಲ್ ಗಳನ್ನು ತಪಾಸಣೆ ಮಾಡಲಾಗುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಈಗಾಗಲೇ ಶಾಲೆಗಳಿಗೆ ಶೇಕಡಾ 90ರಷ್ಟು ಸೈಕಲ್ ವಿತರಿಸಿಯಾಗಿತ್ತು. ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ 5.4 ಲಕ್ಷ ಸೈಕಲ್ ತಯಾರಿಕೆಗೆ ಹೇಳಿ 4.11 ಲಕ್ಷ ವಿತರಣೆಯಾಗಿದೆ. ಇನ್ನು ಉಳಿದ ಸೈಕಲ್ ನ್ನು ಗುಣಮಟ್ಟ ಪರೀಕ್ಷೆ ಮಾಡಿ ಪೂರೈಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement