ಬೆಂಗಳೂರಿನಲ್ಲಿ ಮತ್ತೆ ಮೂರು ಹೊಸ ಮಾರ್ಕೆಟ್: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಂದು ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ನಗರದ ಕೆ. ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ. ಆರ್. ಮಾರುಕಟ್ಟೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪರಿಶೀಲನೆ
ಕೆ. ಆರ್. ಮಾರುಕಟ್ಟೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪರಿಶೀಲನೆ

ಬೆಂಗಳೂರು: ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಂದು ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ   ನಗರದ ಕೆ. ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ. ಆರ್. ಮಾರುಕಟ್ಟೆ ಮಾದರಿಯಲ್ಲೇ  ನಗರದ ಇತರ ಮೂರು ಕಡೆಗಳಲ್ಲಿ  ಬೃಹತ್  ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

 ಕೆ. ಆರ್. ಮಾರುಕಟ್ಟೆಯಲ್ಲಿ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ  ಮೈಸೂರು, ತುಮಕೂರು, ಹಾಗೂ ಹೊಸೂರು ರಸ್ತೆಯಲ್ಲಿ ಇದೇ ರೀತಿಯಲ್ಲಿ ಮಾರುಕಟ್ಟೆ ನಿರ್ಮಿಸಲಾಗುವುದು . ಈ ಸಂಬಂಧ ಬಿಬಿಎಂಪಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗುವುದು, ಮುಂದಿನ ವರ್ಷದ ಬಜೆಟ್ ನಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗುವುದು ಎಂದು ತಿಳಿಸಿದರು.

 ಮಾರುಕಟ್ಟೆಯಲ್ಲಿನ ಅಶುಚಿತ್ವ ಕಂಡು ಅಸಮಾಧಾನಗೊಂಡ ಪರಮೇಶ್ವರ್, ಅನೇಕ ವ್ಯಾಪಾರಿಗಳು ಬಿಬಿಎಂಪಿಗೆ ಬಾಡಿಗೆ ನೀಡುತ್ತಿಲ್ಲ.  ವ್ಯಾಪಾರ ಮಾಡುವ ಕಟ್ಟಡಗಳಿಗೆ ಬೀಗ ಹಾಕಿದ್ದಾರೆ. ಹೀಗಾಗಿ ಖಾಲಿ ಇರುವ ಜಾಗವನ್ನು ಪಾರ್ಕಿಂಗ್ ಇಲ್ಲವೆ ಇನ್ನಿತರ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಾಡಿಗೆ ನೀಡದಿರುವ ವ್ಯಾಪಾರಿಗಳನ್ನು ಪಟ್ಟಿ ಮಾಡಿ ಹದಿನೈದು ದಿನಗಳೊಳಗೆ ಬಾಡಿಗೆ ಕಟ್ಟಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ಮಾರುಕಟ್ಟೆ ಸಂಕೀರ್ಣ ನೆಲ ಮಹಡಿಯಲ್ಲಿ ಪಾರ್ಕಿಂಗ್ ಮಾಡಿದ ಹಳೆಯ ವಾಹನಗಳನ್ನು ಹರಾಜು ಮಾಡಲಾಗುವುದು ಹರಾಜಿನಿಂದ   ಜಾಗ ದೊರಕಿ, ಸಾರ್ವಜನಿಕರ ವಾಹನಗಳಿಗೆ ಅನುಕೂಲವಾಗಲಿದೆ ಎಂದರು

ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿದಂಧೆ  ಹೆಚ್ಚಾಗಿರುವ ಬಗ್ಗೆ ದೂರುಗಳು ಬಂದಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿರುವುದಾಗಿ ತಿಳಿಸಿದ ಪರಮೇಶ್ವರ್, ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಕೇಂದ್ರ ಸ್ಥಾಪನೆ ಮಾಡಿದ್ದರೂ ಇದುವರೆಗೂ ಕಸ ಸಂಸ್ಕರಣೆ ಮಾಡದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಮೀನು ಮಾರುಕಟ್ಟೆಯನ್ನು ಶುಚಿಯಾಗಿಟ್ಟುಕೊಳ್ಳುವಂತೆ ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಅನೇಕ  ಅಂಗಡಿಗಳ ಬಗ್ಗೆ ಮಾಹಿತಿ ನೀಡದ ಬಿಬಿಎಂಪಿಯ ಉಪ ಆಯುಕ್ತರಾದ ಮುನಿ ಲಕ್ಷ್ಮಿ ಅವರನ್ನು  ಪರಮೇಶ್ವರ್ ಸೇವೆಯಿಂದ ಅಮಾನತುಗೊಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com