
ಬೆಂಗಳೂರು : ಪಶ್ಚಿಮ ಬೆಂಗಳೂರು ಭಾಗದಲ್ಲಿರುವ ಕುರುಬರಹಳ್ಳಿಯಲ್ಲಿ ಕಳೆದ ವರ್ಷ ಅಕ್ಟೋಬರ್ 13 ರಂದು ಭಾರೀ ಮಳೆಯಿಂದಾಗಿ 5 ಮಂದಿ ಮೃತಪಟ್ಟಿದ್ದರು. ರಾಜಕಾಲುವೆ ಬಳಿ ವಾಸಿಸುತ್ತಿದ್ದ ಕಮಲಮ್ಮ ಮತ್ತು ಶಂಕರಪ್ಪ ದಂಪತಿ ಸೇರಿದಂತೆ ಅವರ ತಾಯಿ ಮಗಳು, ಮೀನಾಕ್ಷಿ, ಪುಷ್ಪ ರಾಜಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಮೃತ್ಯೂಕೂಪದಂತಿರುವ ಈ ರಾಜಕಾಲುವೆಯಲ್ಲಿ ಒಂದು ವರ್ಷದ ನಂತರವೂ ಮತ್ತೆ ದುರಂತ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಬೇರೆ ಬೇರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಿಗೆ ಬರುವ ಈ ಕಾಲುವೆಯ ಒಂದು ಭಾಗವನ್ನು ಮಾತ್ರ ಸರಿಪಡಿಸಲಾಗಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕಾಲುವೆ ಸರಿಪಡಿಸದೆ ಇರುವುದರಿಂದ ಜನರು ತೀವ್ರ ರೀತಿಯ ತೊಂದರೆ ಎದುರಿಸುವಂತಾಗಿದೆ.
ಕಾಲುವೆ ಬಳಿಯಿರುವ ಮನೆಗಳಿಗೆ ನೀರು ಪ್ರವೇಶಿಸದಂತೆ ತಡೆಗಟ್ಟಲು ಒಂದು ಗೋಡೆ ಸ್ಥಾಪಿಸಲಾಗಿದ್ದು, ಗೋಡೆಯ ಮೇಲೆ ಬೇಲಿ ಹಾಕಲಾಗಿದೆ. ಆದರೆ ಬಲಭಾಗದ ಕಾಲುವೆ ನಿರ್ಲಕ್ಷ್ಯಕ್ಕೊಳಪಟ್ಟಿರುವುದರಿಂದ ಮಳೆ ನೀರು ಮನೆಗೆ ನುಗ್ಗುವಂತಾಗಿದೆ ಎಂದು ಟೈಲರ್ ಷಣ್ಮುಗ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಆದರೆ, ನೀರು ಬಾರದಂತೆ ಹಾಕಿರುವ ತಡೆಗೋಡೆ ಸಹ ಎತ್ತರದಲ್ಲಿ ಇಲ್ಲ ಎಂದು ಕುರುಬರಹಳ್ಳಿ ನಿವಾಸಿ ರಾಧಾ ಆರೋಪಿಸಿದರು. ಬೆಂಗಳೂರಿನಲ್ಲಿ ಪ್ರತಿದಿನ ಮಳೆಯಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ದುರಂತ ಸಂಭವಿಸುವ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಕೆಂಪೇಗೌಡ ಲೇಔಟ್ ನಿವಾಸಿ ಅಳಲು ತೋಡಿಕೊಂಡರು.
Advertisement