
ಹಾಸನ: ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಶೀಘ್ರವೇ ಪತನವಾಗಲಿದೆ ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜ್ಯ ಮೈತ್ರಿ ಸರ್ಕಾರದ ಭವಿಷ್ಯ ಇನ್ನೆರಡು ತಿಂಗಳು ಮಾತ್ರ ಎಂದು ಕೂಡ ಹೇಳಿದ್ದಾರೆ.
ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಅದು 5 ವರ್ಷ ಆಳ್ವಿಕೆ ನಡೆಸುವುದಿಲ್ಲ, ಆರು ತಿಂಗಳು ಮಾತ್ರ ಎಂದು ಪದೇ ಪದೇ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಲೇ ಇವೆ. ಅನೇಕ ಸ್ವಾಮೀಜಿಗಳು ಕೂಡ ಇದಕ್ಕೆ ದನಿಗೂಡಿಸುತ್ತಾರೆ. ರಾಜಕೀಯ ನಾಯಕರ ಭವಿಷ್ಯ ಹೇಳಿ ಸುದ್ದಿಯಾಗುವ ಕೋಡಿಮಠದ ಸ್ವಾಮೀಜಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.
ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಮಾತನಾಡಿದ ಅವರು, ಏನಾಗಲಿದೆ ಎಂಬುದನ್ನು ಮುಂದಿನ ನವೆಂಬರ್ ವರೆಗೆ ಕಾದು ನೋಡಿ, ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ ಎಂಬ ಕುತೂಹಲ ಕಾತರವನ್ನು ರಾಜ್ಯದ ಜನತೆ ಮುಂದಿಟ್ಟಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ರೀತಿಯಲ್ಲಿ ಮತ್ತೊಬ್ಬ ಗಣ್ಯ ನಾಯಕರು ನವೆಂಬರ್ ಒಳಗೆ ವಿಧಿವಶರಾಗಲಿದ್ದಾರೆ. ಆ ರೀತಿಯ ಸೂತಕ ಮುಂದುವರಿಯಲಿದೆ ಎಂದ ಸ್ವಾಮೀಜಿ, ಭ್ರಾತೃ ಬಲ ಹೆಚ್ಚಿತು ಎಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ಬೆಳಗಾವಿಯಲ್ಲೀಗ ಯಾರಿಂದ ಕಲಹ ನಡೆಯುತ್ತಿದೆ? ಎಂದು ಮರುಪ್ರಶ್ನೆ ಹಾಕಿದರು.
ಇನ್ನೂ ಅಂಥದೇ ಸಮಸ್ಯೆ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ. ನಾನು ಹೇಳಿದ್ದು ಯಾವುದೂ ಸುಳ್ಳಾಗಲ್ಲ. ಎಲ್ಲದಕ್ಕೂ ನವೆಂಬರ್ ವರೆಗೂ ಕಾದು ನೋಡಿ ಎಂದಷ್ಟೇ ಹೇಳಿದರು.
Advertisement