ನಿಗದಿಯಂತೆ ಸರ್ಕಾರಿ ಕಾರ್ಯಕ್ರಮ, ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ: ಸಿಎಂ ಎಚ್ ಡಿಕೆ

ಮೈಸೂರು ರಾಜವಂಶಸ್ಥರಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರವಿದ್ದು, ಇಂದು ನಡೆಯುವ ಜಂಬೂ ಸವಾರಿಗೆ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ಮೈಸೂರು ರಾಜವಂಶಸ್ಥರಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರವಿದ್ದು, ಇಂದು ನಡೆಯುವ ಜಂಬೂ ಸವಾರಿಗೆ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ ವಂಶಸ್ಥೆ ಪ್ರಮೋದಾದೇವಿ ತಾಯಿ ಪುಟ್ಟಚಿನ್ನಮ್ಮಣಿ  ನಿಧನ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸೂತಕದ ಛಾಯೆ ಇದ್ದು, ರಾಜವಂಶಸ್ಥರು ಸರ್ಕಾರಕ್ಕೆ ಚಿನ್ನದ ಅಂಬಾರಿ ನೀಡಲಾಗುವುದಿಲ್ಲ ಎಂಬ ಊಹಾಪೋಹಗಳಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರು, ಸರ್ಕಾರದ ಕಾರ್ಯಕ್ರಮಗಳಿಗೆ ಅರಮನೆಯ ರಾಜವಂಶಸ್ಥರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ರಾಜಮಾತೆಯ ನಿಧನದ ಬಳಿಕ ತಾವು ರಾಜವಂಶಸ್ಥರೊಂದಿಗೆ ಮಾತನಾಡಿದ್ದು, ಜಂಬೂ ಸವಾರಿಗೆ ಅರಮನೆಯಿಂದ ಬೇಕಾದ ಎಲ್ಲ ನೆರವನ್ನೂ ನೀಡುವುದಾಗಿ ಹೇಳಿದ್ದಾರೆ.
ಈ  ಹಿಂದೆ ನಿಗದಿಯಾದಂತೆ ದಸರಾ ನಿಮಿತ್ತ ಜಂಬೂ ಸವಾರಿ ಸಮೇತ ಸರ್ಕಾರದ ಎಲ್ಲ ಕಾರ್ಯಕ್ರಮಗಳೂ ನಿಗದಿಯಂತೆಯೇ ನಡೆಯುತ್ತದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್​​ 22ಕ್ಕೆ ಅರಮನೆ ಧಾರ್ಮಿಕ ಕೈಂಕಕ್ಯ ಮುಂದೂಡಿಕೆ
ಇನ್ನು ಇಂದು ವಿಜಯದಶಮಿ ನಿಮಿತ್ತ ಅರಮನೆಯಲ್ಲಿ ನಡೆಯಬೇಕಿದ್ದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಅಕ್ಟೋಬರ್​​ 22ಕ್ಕೆ ಮುಂದೂಡಲಾಗಿದೆ. ರಾಜಮಾತೆಯ ತಾಯಿ ನಿಧನದ ಹಿನ್ನಲೆಯಲ್ಲಿ ಅರಮನೆಯಲ್ಲಿ 3 ದಿನ ಸೂತಕವಿದ್ದು, 3 ದಿನಗಳ ಬಳಿಕ ಧಾರ್ಮಿಕ ಕೈಂಕರ್ಯ ನೆರವೇರಿಸಲು ರಾಜವಂಶಸ್ಥರು ನಿರ್ಧರಿಸಿದ್ದಾರೆ. ಅಂತೆಯೇ ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದರಿಂದಾಗಿ ಅರಮನೆಯಲ್ಲಿ ಇಂದು ರಾಜವಂಶ್ಥರಿಂದ ನಡೆಯ ಬೇಕಿದ್ದ ಉತ್ತರ ಪೂಜೆ, ಖಾಸ್ ಆಯುಧಗಳಿಗೆ ಕಾರ್ಯಕ್ರಮಗಳು ರದ್ದಾಗಿವೆ. ಬೆಂಗಳೂರು, ಚಾಮರಾಜನಗರ, ಮೈಸೂರಿನ ಜಟ್ಟಿಗಳಿಂದ ಬೆಳಗ್ಗೆ 10 ಗಂಟೆಗೆ ನಡೆಯಬೇಕಿದ್ದ ವಜ್ರಮುಷ್ಠಿ ಕಾಳಗ ಕುಸ್ತಿ ಪಂದ್ಯ ರದ್ದಾಗಿವೆ.
ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಮಂಟಪಕ್ಕೆ ಯದುವೀರ್‌ ಒಡೆಯರ್‌ ಅವರು ಪೂಜೆ ಸಲ್ಲಿಸಬೇಕಿತ್ತು. ಉತ್ತರ ಪೂಜೆಯನ್ನುಇದೀಗ  ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com