ಮಡಿಕೇರಿ: ಗೋಬಿ ಮಂಚೂರಿ ನೀಡಲಿಲ್ಲವೆಂದು ಹೊಟೇಲ್ ಮಾಲೀಕ ಮೇಲೆ ಹಲ್ಲೆ, ಇಬ್ಬರಿಗೆ ಗಾಯ

ಬಿಲ್ ಪಾವತಿಸಿಲ್ಲ ಎಂದು ಗ್ರಾಹಕರು ಕೇಳಿದ ಆಹಾರ ನೀಡದಿದ್ದುದಕ್ಕೆ ಫಾಸ್ಟ್ ಫುಡ್ ಕೇಂದ್ರದಲ್ಲಿ ಗುಂಡು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಬಿಲ್ ಪಾವತಿಸಿಲ್ಲ ಎಂದು ಗ್ರಾಹಕ ಕೇಳಿದ ಆಹಾರ ನೀಡದಿದ್ದುದಕ್ಕೆ ಫಾಸ್ಟ್ ಫುಡ್ ಕೇಂದ್ರದ ಮಾಲೀಕರ ಮೇಲೆ ಗುಂಡು ಹಾರಿಸಿದ ಘಟನೆ ಮಡಿಕೇರಿಯ ಹಿಲ್ ರೋಡ್ ಸಮೀಪ ನಡೆದಿದೆ.ಬಂದೂಕು ಹಾರಿಸಿದ್ದರಲ್ಲಿ ಇಬ್ಬರು ಗಾಯಗೊಂಡಿದ್ದು ಈ ಸಂಬಂಧ ಮಡಿಕೇರಿ ಪಟ್ಟಣ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹಿಲ್ ರೋಡ್ ನಲ್ಲಿ ಕಾವೇರಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿರುವ ಲೋಕೇಶ್ ತನ್ನ ಸಹಾಯಕ ಅಕ್ರಮ್ ಗೆ ಪಕ್ಕದ ಫಾಸ್ಟ್ ಫುಡ್ ಕೇಂದ್ರದಿಂದ ಎಗ್ ರೋಲ್ ತಂದುಕೊಡುವಂತೆ ಹೇಳಿದ್ದ. ಫಾಸ್ಟ್ ಫುಡ್ ಕೇಂದ್ರದ ಮಾಲೀಕ ರಿಯಾಜ್ ಎಗ್ ರೋಲ್ ನ್ನು ಅಕ್ರಮ್ ಕೈಯಲ್ಲಿ ಕೊಟ್ಟು ಕಳುಹಿಸಿದ್ದ. ಆದರೆ ಅದಕ್ಕೆ ಹಣ ನೀಡಿರಲಿಲ್ಲ.

ಎರಡನೇ ಬಾರಿ ಗೋಬಿ ಮಂಚೂರಿ ತಂದು ಕೊಡುವಂತೆ ಅಕ್ರಮ್ ನ್ನು ಲೋಕೇಶ್ ಕಳುಹಿಸಿದ್ದ. ಮೊದಲ ಬಾರಿ ಕೊಟ್ಟಿದ್ದ ಎಗ್ ರೋಲ್ ನ ಹಣ ನೀಡದೆ ಗೋಬಿ ಮಂಚೂರಿ ನೀಡುವುದಿಲ್ಲವೆಂದು ರಿಯಾಜ್ ಹೇಳಿದ. ಇದರಿಂದ ಸಿಟ್ಟುಗೊಂಡ ಲೋಕೇಶ್, ಫಾಸ್ಟ್ ಫುಡ್ ಕೇಂದ್ರಕ್ಕೆ ಹೋಗಿ ರಿಯಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಬಾರ್ ಗೆ ಬಂದು ಎಸ್ ಬಿಬಿಎಲ್ ಗನ್ ನಿಂದ ಮೂರು ಗುಂಡು ಹೊಡೆದಿದ್ದಾನೆ. ಮೊದಲ ಗುಂಡು ತಪ್ಪಿದರೆ ಮತ್ತೆರಡು ಗುಂಡು ಹೊಟೇಲ್ ನ ರಿಯಾಜ್ ಮತ್ತು ಸಮೀಮ್ ಅವರನ್ನು ಗಾಯಗೊಳಿಸಿದೆ.

ಕೂಡಲೇ ಪೊಲೀಸರಿಗೆ ವಿಷಯ ತಲುಪಿತು. ಗಾಯಾಳುಗಳನ್ನು ಮಡಿಕೇರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಡಿಕೇರಿ ಪಟ್ಟಣ ಪೊಲೀಸರು ಕಾವೇರಿ ಬಾರ್ ಗೆ ಹೋಗಿ ಲೋಕೇಶ್ ಮತ್ತು ಅಕ್ರಮ್ ನನ್ನು ಬಂಧಿಸಿದರು. ದಾಳಿ ನಡೆಸಲು ಬಳಸಿದ್ದ ಗನ್ ನ್ನು ವಶಪಡಿಸಿಕೊಳ್ಳಲಾಯಿತು.

ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎನ್ನುತ್ತಾರೆ ಇನ್ಸ್ ಪೆಕ್ಟರ್ ಅನೂಪ್ ಮಾದಪ್ಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com