ಮೈತ್ರಿ ಸರ್ಕಾರದ ಕೆಲಸಗಳಿಗೆ ಸೂಕ್ತ ಪ್ರಚಾರ ಮಾಧ್ಯಮಗಳಿಂದ ಸಿಗುತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ ...
ಮಾಧ್ಯಮ ಸಂವಾದವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮಾಧ್ಯಮ ಸಂವಾದವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ ಕೂಡ ತಮ್ಮ ಸರ್ಕಾರಕ್ಕೆ ಸಿಗಬೇಕಾದ ಪ್ರಚಾರ, ಸ್ಥಾನಮಾನ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ 150 ದಿನ ತುಂಬಿದ ಹಿನ್ನಲೆಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನತೆಗೆ ತಿಳಿಸುವ ಬದಲು ಮಾಧ್ಯಮಗಳು ಮೈತ್ರಿ ಸರ್ಕಾರ ಯಾವಾಗ ಬಿದ್ದು ಹೋಗುತ್ತದೆ ಎಂದು ಸುದ್ದಿ ನೀಡುವುದರಲ್ಲಿಯೇ ಹೆಚ್ಚು ಮಗ್ನವಾಗಿವೆ ಎಂದು ಅಸಮಾಧಾನ ಹೊರಹಾಕಿದರು.

ತಮ್ಮ ಸರ್ಕಾರವನ್ನು ಹಲವು ಬಗೆಯಲ್ಲಿ ಸಮರ್ಥಿಸಿಕೊಂಡರು ಮತ್ತು ತಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೂಡ ಹೇಳಿಕೊಂಡರು.

ನನಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿದ್ದು ದೇವರು ಕೊಟ್ಟದ್ದು ಎಂದು ಬಣ್ಣಿಸಿದರು. ಆ ಸ್ಥಾನದಲ್ಲಿ ಎಷ್ಟು ಸಮಯ ಇರುತ್ತೇನೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಮಾಧ್ಯಮಗಳು ಸಮ್ಮಿಶ್ರ ಸರ್ಕಾರದ ರಾಜಕೀಯ ಮತ್ತು ಅದು ಬಿದ್ದುಹೋಗುವ ಊಹಾಪೋಹಗಳ ಬಗ್ಗೆ ಮಾಧ್ಯಮಗಳು ಸುದ್ದಿ ಬಿತ್ತರ ಮಾಡುತ್ತಿವೆಯೇ ಹೊರತು ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಅಭಿವೃದ್ಧಿಪರ ಚಟುವಟಿಕೆಗಳನ್ನು ಜನತೆಗೆ ತೋರಿಸುತ್ತಿಲ್ಲ ಎಂದರು.

ನಾನು ಮಂಡಿಸಿರುವ ಬಜೆಟ್ ನಲ್ಲಿ ಒಟ್ಟಾರೆಯಾಗಿ 460 ಘೋಷಣೆಗಳನ್ನು ಮಾಡಲಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಬಜೆಟ್ ನಲ್ಲಿ ಮಂಡಿಸಿರುವ ಘೋಷಣೆಗಳಲ್ಲಿ ಸಹ ಕೆಲವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಆದರೆ ಅವುಗಳೆಲ್ಲಾ ಸುದ್ದಿಯಾಗುತ್ತಿಲ್ಲ. ಈ ಮೈತ್ರಿ ಸರ್ಕಾರ ಯಾವಾಗ, ಎಲ್ಲಿ, ಹೇಗೆ ಮುರಿದು ಬೀಳುತ್ತದೆ ಎಂದು ತಿಳಿದುಕೊಳ್ಳುವುದರಲ್ಲಿಯೇ ಮಾಧ್ಯಮಗಳು ಹೆಚ್ಚು ಆಸಕ್ತಿ ವಹಿಸಿದಂತೆ ಕಂಡುಬರುತ್ತಿದೆ. ಪ್ರತಿಯೊಬ್ಬರೂ ರೈತರ ಸಾಲಮನ್ನಾ ಬಗ್ಗೆ ಸಂಶಯ ಪಟ್ಟುಕೊಂಡರು. ಆದರೆ ಇರುವ ಇತಿಮಿತಿಯೊಳಗೆ ಅದನ್ನು ನಾನು ಸಾಧ್ಯವಾಗಿಸಿದ್ದೇನೆ, ಮೈತ್ರಿ ಸರ್ಕಾರದ ಭಾಗವಾಗಿಯೇ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.

ಸುಮಾರು 2 ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ, ಹಲವು ಇಲಾಖೆಗಳಿಗೆ ಹಣ ಹಂಚಿಕೆ, ಮೂಲಭೂತ ಮತ್ತು ಉತ್ಪಾದನಾ ವಲಯಗಳಿಗೆ ಒತ್ತು ನೀಡುವಿಕೆ, ನಗರಾಭಿವೃದ್ಧಿ, ಕೊಡಗು ಜಿಲ್ಲೆಯ ಪುನರ್ವಸತಿ ಇತ್ಯಾದಿಗಳ ಬಗ್ಗೆ ಮಾತನಾಡಿದರು.

ರೈತರ ಸಾಲಮನ್ನಾ ಬಗ್ಗೆ ವಿವರ ನೀಡಿದ ಅವರು, ಬಜೆಟ್ ಭಾಗವಾಗಿ ಮುಂದಿನ ವರ್ಷ 6 ಸಾವಿರ ಕೋಟಿ ರೂಪಾಯಿಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪಾವತಿಸಲು ತಾನು ಯೋಜನೆ ಹೊಂದಿದ್ದೇನೆ. ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಅನ್ನ ಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ವಿತರಣೆ ಮಾಡುವ ಒತ್ತಡ ನನ್ನ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಮೇಲೆ ಹರಿಹಾಯ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ವಿರೋಧ ಪಕ್ಷದವರು ಸರ್ಕಾರದ ಹಣಕಾಸು ಸ್ಥಿತಿಬಗ್ಗೆ ಶ್ವೇತಪತ್ರ ಕೇಳುತ್ತಿದ್ದಾರೆ, ರಾಜ್ಯ ಆರ್ಥಿಕವಾಗಿ ಬೆಳೆಯುತ್ತಿದೆ ಮತ್ತು ರಾಜ್ಯ ಸರ್ಕಾರದ ಖಜಾನೆಯಲ್ಲಿ ಯೋಜನೆಗಳಿಗೆ ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಸರ್ಕಾರ ಎಲ್ಲಾ ಹಣವನ್ನು ರೈತರ ಸಾಲಮನ್ನಾಗೆ ಬಳಕೆ ಮಾಡಿದೆ ಎಂಬ ಆರೋಪವನ್ನು ಸಹ ಅವರು ನಿರಾಕರಿಸಿದ್ದಾರೆ. ಈ ವರ್ಷ ಸೆಪ್ಟೆಂಬರ್ ವರೆಗೆ 75,634 ಕೋಟಿ ಹಣ ಮೂಲಕ ಶೇಕಡಾ 11ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಸರ್ಕಾರದ ಹಣಕಾಸು ಸ್ಥಿತಿಗತಿ ಉತ್ತಮವಾಗಿದೆ. ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಯಂತಹ ಇಲಾಖೆಗಳಿಗೆ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಕೆಲಸಗಳಿಗೆ ಕೋಟಿಗಟ್ಟಲೆ ಹಣ ಮೀಸಲಿಡಲಾಗಿದೆ ಎಂದರು.

ಶ್ರೇಣಿ ಆಧಾರದಲ್ಲಿ ವರ್ಗಾವಣೆ: ಅಧಿಕಾರಿಗಳ ವರ್ಗಾವಣೆಯನ್ನು ಸಮ್ಮಿಶ್ರ ಸರ್ಕಾರ ವ್ಯಾಪಾರೀಕರಣಗೊಳಿಸುತ್ತಿದೆ ಎಂಬ ಆರೋಪವನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ನಿರಾಕರಿಸಿದ್ದಾರೆ. ನನ್ನ ಕಚೇರಿಯಲ್ಲಿ ಉದ್ಯೋಗಿಗಳ ಶ್ರೇಣಿ ಆಧಾರದಲ್ಲಿ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳಿಂದ ಹಣ ಪಡೆಯುತ್ತಿಲ್ಲ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಅಧಿಕಾರಿಗಳು ತೊಡಗಬಾರದು ಎಂದು ನಾನು ಎಚ್ಚರಿಕೆ ನೀಡಿದ್ದೇನೆ ಎಂದರು.

ತಾವು ಪದೇ ಪದೇ ದೇವಾಲಯಗಳಿಗೆ ಭೇಟಿ ನೀಡುವುದಕ್ಕೆ ವ್ಯಕ್ತವಾಗುತ್ತಿರುವ ಟೀಕೆ, ಹಾಸ್ಯಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ತಮ್ಮ ಕುಟುಂಬದವರಿಗೆ ದೇವಸ್ಥಾನಗಳಿಗೆ ಹೋಗುವ ಅಭ್ಯಾಸ ಹಿಂದಿನಿಂದಲೂ ಇದೆ. ರಾಜ್ಯದ ಜನತೆಯ ಒಳಿತಿಗೆ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಯವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಕೇಂದ್ರ ಸಚಿವರುಗಳನ್ನು ಸಹ ನನ್ನ ಪ್ರತಿ ದೆಹಲಿ ಭೇಟಿ ಸಂದರ್ಭದಲ್ಲಿ ಭೇಟಿ ಮಾಡುತ್ತೇನೆ ಎಂದರು.

ಕೊಡಗಿನ ಜನರಿಗೆ ಪರಿಹಾರ: ಸರ್ಕಾರ ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ 2 ಬೆಡ್ ರೂಂನ ಮನೆ ನಿರ್ಮಿಸಿ ಕೊಡಲಿದೆ. ಕೊಡಗು ಜಿಲ್ಲೆಗೆ ಬಂದಿರುವ 187.16 ಕೋಟಿ ರೂಪಾಯಿ ಹಣವನ್ನು ಅಲ್ಲಿನ ಸಂತ್ರಸ್ತರ ಪುನರ್ವಸತಿಗೆ ಬಳಸಿಕೊಳ್ಳಲಾಗುವುದು. ಕಾಫಿ ಬೆಳೆಗಾರರಿಗೆ ಸಹ ಪರಿಹಾರ ನೀಡಲು ಕೇಂದ್ರ ಸಚಿವ ಸುರೇಶ್ ಪ್ರಭು ಜೊತೆ ಮಾತುಕತೆ ನಡೆಸಿದ್ದೇನೆ. ಕಾಫಿ ಬೆಳೆಗಾರರ ನಷ್ಟ ತುಂಬಲು ಶೇಕಡಾ 50ರಷ್ಟು ಕೇಂದ್ರ ಭರಿಸುವುದಾಗಿ ನಮಗೆ ಭರವಸೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com