
ಬೆಂಗಳೂರು: ನೈರುತ್ಯ ಮುಂಗಾರು ಮಳೆ ಕೊರತೆ ಅನುಭವಿಸಿದ್ದ ಕರ್ನಾಟಕ ರಾಜ್ಯ ಇದೀಗ ಈಶಾನ್ಯ ಮುಂಗಾರು ವಿಳಂಬ ಎದುರಿಸುತ್ತಿದೆ. ಪ್ರತಿವರ್ಷ ಈ ಸಮಯಕ್ಕೆ ಈಶಾನ್ಯ ಮುಂಗಾರು ರಾಜ್ಯವನ್ನು ಪ್ರವೇಶಿಸುತ್ತದೆ. ಆದರೆ ಅಕ್ಟೋಬರ್ ಮೂರನೇ ವಾರವಾದರೂ ಈಶಾನ್ಯ ಮುಂಗಾರು ರಾಜ್ಯವನ್ನು ಪ್ರವೇಶಿಸಿಲ್ಲ. ಈ ವರ್ಷ ನೈರುತ್ಯ ಮುಂಗಾರು ಅಕ್ಟೋಬರ್ 21ರ ವೇಳೆಗೆ ರಾಜ್ಯವನ್ನು ನಿರ್ಗಮಿಸಿದೆ, ಈ ಹೊತ್ತಿಗೆ ಈಶಾನ್ಯ ಮಾರುತ ಪ್ರವೇಶವಾಗಬೇಕಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೈರುತ್ಯ ಮುಂಗಾರು ರಾಜ್ಯದಲ್ಲಿ 839 ಮಿಲಿ ಮೀಟರ್ ನಷ್ಟು ಸುರಿಯಬೇಕಾಗಿತ್ತು. ಆದರೆ ರಾಜ್ಯದಲ್ಲಿ ಸುರಿದಿದ್ದು 804 ಮಿಲಿ ಮೀಟರ್. ಉತ್ತರ ಒಳನಾಡು ಭಾಗಗಳಾದ ಬಳ್ಳಾರಿ, ಹಾವೇರಿ, ಗದಗ, ಬೆಳಗಾವಿ, ಧಾರವಾಡ, ಕೊಪ್ಪಳ, ವಿಜಯಪುರ, ಬೀದರ್ ಮತ್ತು ಕಲಬುರಗಿಗಳಲ್ಲಿ ಜೂನ್ 1ರಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ಮುಂಗಾರು 804 ಮಿಲಿ ಮೀಟರ್ ನಷ್ಟು ಸುರಿದಿದೆ. ಅಕ್ಟೋಬರ್ ನಲ್ಲಿ ಇನ್ನೂ ಕಡಿಮೆಯಾಗಿದ್ದು ರಾಜ್ಯದಲ್ಲಿ ವಾಡಿಕೆಯ 113 ಮಿಲಿ ಮೀಟರ್ ಗಿಂತ 76 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ.
ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಎಸ್ ಎಸ್ ಎಂ ಗಾವಸ್ಕರ್, ಈಶಾನ್ಯ ಮಾರುತ ಆಗಮನದಲ್ಲಿ ಸ್ವಲ್ಪ ತಡವಾಗುತ್ತಿದೆ. ನಾಳೆ ತಮಿಳುನಾಡು ಪ್ರವೇಶಿಸಲಿದೆ. ಕರ್ನಾಟಕದಲ್ಲಿ ಶನಿವಾರ ಅಥವಾ ಭಾನುವಾರ ಸುರಿಯಲಿದೆ ಎನ್ನುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪ್ರೊ ಎಂ ಬಿ ರಾಜೇಗೌಡ, ಈಶಾನ್ಯ ಮಾರುತದ ಆಗಮನದ ವಿಳಂಬದಿಂದ ಬೆಳಗಳಿಗೆ ಸೂಕ್ತ ಕಾಲಕ್ಕೆ ನೀರು ಸಿಗದೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎನ್ನುತ್ತಾರೆ.
Advertisement