ಬೆಂಗಳೂರು: ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ವೇಳೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರುಪಾಯಿ ದಂಡ ವಿಧಿಸಿ 10ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಘಟನೆ ನಡೆದು ಕೇವಲ 29 ದಿನಗಳಲ್ಲೇ ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ನೀಡಿದ್ದು, ಕರ್ತವ್ಯನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವವರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಕಳೆದ ಆಗಸ್ಟ್ 2ರಂದು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಬಳಿಯ ಚೌಡೇಶ್ವರಿ ದೇವಸ್ಥಾನದ ಬಳಿ ಬಿಬಿಎಂಪಿ ಅಧಿಕಾರಿಗಳು ಫ್ಲೆಕ್ಸ್ ತೆರವಿಗೆ ಮುಂದಾಗಿದ್ದರು. ಈ ವೇಳೆ ಅಪರಾಧಿಗಳು ಬಿಬಿಎಂಪಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 10ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಚ್ ಶೀಟ್ ಸಲ್ಲಿಕೆ ಮಾಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶ .ಬಿ.ಕೆ.ನಾಗೇಶ್ ಮೂರ್ತಿ ಅವರ ಪೀಠ, ಸಂತೋಷ, ಸರವಣನ್, ರಾಜೇಂದ್ರ, ಸಿಮನ್ಸ್, ಕಮಲನಾಥ್. ಸೂರ್ಯ, ಮಲ್ಲಿಕಾರ್ಜುನಗೆ ಶಿಕ್ಷೆ ನೀಡಿದೆ.