ಗೋಏರ್: ಆಗಸದಲ್ಲೇ ಬೆಂಗಳೂರು-ಪುಣೆ ವಿಮಾನದ ಎಂಜಿನ್ ಆಫ್, ತುರ್ತು ಲ್ಯಾಂಡಿಂಗ್ ಸುರಕ್ಷಿತ

ಬೆಂಗಳೂರಿನಿಂದ ಪುಣೆಯತ್ತ ಹೊರಟಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನದ ಎಂಜಿನ್, ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲೇ ಆಗಸದಲ್ಲಿಯೇ ಆಫ್ ಆದ ಆಘಾತಕಾರಿ ಘಟನೆ ಶನಿವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬೆಂಗಳೂರಿನಿಂದ ಪುಣೆಯತ್ತ ಹೊರಟಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನದ ಎಂಜಿನ್, ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲೇ ಆಗಸದಲ್ಲಿಯೇ ಆಫ್ ಆದ ಆಘಾತಕಾರಿ ಘಟನೆ ಶನಿವಾರ ನಡೆದಿದೆ. 
ವಿಮಾನದ ಮತ್ತೊಂದು ಎಂಜಿನ್ ಸುರಕ್ಷಿತವಾಗಿದ್ದ ಕಾರಣ, ಕೂಡಲೇ ವಿಮಾನವನ್ನು ಮರಳಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಂದು ಸುರಕ್ಷಿತವಾಗಿ ಇಳಿಸಲಾಯಿತು. 
169 ಪ್ರಯಾಣಿಕರನ್ನು ಹೊತ್ತಿದ್ದ ಏರ್'ಬಸ್ ಎ 320 ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ಸಮಸ್ಯೆಗೆ ತುತ್ತಾಗಿತ್ತು. ಹೀಗಾಗಿ ಕೂಡಲೇ ವಿಮಾನವನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು. ಈ ವೇಯೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. 
ಘಟನೆ ಕುರಿತಂತೆ ವಿಮಾನಯಾನ ಸಚಿವಾಲಯ ಗೋ ಏರ್'ನಿಂದ ವರದಿ ಕೇಳಿದೆ ಎಂದು ತಿಳಿದುಬಂದಿದೆ.
ಏರ್'ಬಸ್ ಎ 320 ವಿಮಾನದಲ್ಲಿ ಬಳಸುವ ಪ್ರೆಟ್ ಆ್ಯಂಡ್ ವಿಟ್ನೆ ಎಂಜಿನ್ ಗಳು ಇತ್ತೀಚೆಗೆ ಹಲವು ದಿನಗಳಲ್ಲಿ ದಿಢೀರನೆ ಕೈಕೊಡುತ್ತಿವೆ. ಇದೇ ಕಾರಣಕ್ಕಾಗಿ ಕಳೆದ ಕೆಲ ದಿನಗಳಲ್ಲಿ ಇಂಡಿಗೋ ಸಂಸ್ಥೆಯ 7 ಮತ್ತು ಗೋ ಏರ್ ಸಂಸ್ಥೆಯ 2 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. 
ಗೋ ಏರ್ ವಿಮಾನದಲ್ಲಿ ಕೆಲ ಸಣ್ಣ ಪುಟ್ಟ ಸಮಸ್ಯೆಗಳಿದ್ದವು. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ಸಹಾಯಗಳನ್ನು ಮಾಡಲಾಯಿತು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ. 
ಜಿ8-283 ಬಿಎಲ್ಆರ್-ಪಿಎನ್'ಕ್ಯೂ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿತ್ತು. ಬಳಿಕ ವಿಮಾನವನ್ನು ಮತ್ತೆ ಬೆಂಗಳೂರಿಗೆ ತಂದು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಲಾಗಿಯಿತು. ಬಳಿಕ ಎಲ್ಲಾ ಪ್ರಯಾಣಿಕರಿಗೂ ಪರ್ಯಾಯ ವಿಮಾನ ವ್ಯವಸ್ಥೆಗಳನ್ನು ಕಲ್ಪಿಸಲಾಯಿತು. ಪ್ರಯಾಣಿಕರಿಗೆ ಎದುರಾದ ಸಮಸ್ಯೆಗೆ ವಿಷಾದ ವ್ಯಕ್ತಪಡಿಸುತ್ತೇವೆಂದು ಗೋ ಏರ್ ವಕ್ತಾರರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com