

ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ವಂಚಿಸಿದ ಜ್ಯೋತಿಷಿ ವಿರುದ್ಧ 32 ವರ್ಷದ ಮಹಿಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ ಘಟನೆ ಕಳೆದ ಭಾನುವಾರ ಜ್ಞಾನಭಾರತಿಯಲ್ಲಿ ನಡೆದಿದೆ.
ಆರೋಪಿಗಳನ್ನು ಗಣೇಶ್ ರಾಜನ್, ಆತನ ಸೋದರ ಗಂಗರಾಮ್ ಎಂದು ಗುರುತಿಸಲಾಗಿದ್ದು ಇವರು ಮುನೇಶ್ವರ ಬ್ಲಾಕ್ ನಿವಾಸಿಯಾಗಿದ್ದಾರೆ.
ಬೆಂಗಳೂರಿನ ಜ್ಞಾನಭಾರತಿ ಲೇ ಔಟ್ ನಿವಾಸಿಯಾಗಿರುವ ಆಶಾ ತನ್ನ ಕುಟುಂಬದ ಸಮಸ್ಯೆ ಬಗ್ಗೆ ಪರಿಹಾರ ಕೇಳಲು ಜ್ಯೋತಿಷಿ ರಾಜನ್ ಮನೆಗೆ ಹೋಗಿದ್ದರು. ಆಗ ರಾಜನ್ ಸರ್ಕಾರಿ ಇಲಾಖೆಯಲ್ಲಿ ಕ್ಲರ್ಕ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದರು. ರಾಜನ್ ಮತ್ತು ಅವರ ಸೋದರನ ಮಾತನ್ನು ಆಶಾ ನಂಬಿ 5 ಲಕ್ಷ ರೂಪಾಯಿ ನೀಡಿದ್ದರು.
ನಂತರ ಒಂದು ದಿನ ಕೆಲಸ ಕೊಡಿಸುವುದು ಏನಾಯಿತು ಎಂದು ಆಶಾ ಹೋಗಿ ನೋಡಿದಾಗ ಅಣ್ಣ-ತಮ್ಮ ಇಬ್ಬರೂ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ತಾನು ಮೋಸ ಹೋಗಿದ್ದೇನೆ ಎಂದು ಅರಿವಾದಾಗ ಆಶಾ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.