ಗೌರಿ ಹತ್ಯೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದ ಇಂದಿರಾ ಲಂಕೇಶ್(ಸಂಗ್ರಹ ಚಿತ್ರ)
ಗೌರಿ ಹತ್ಯೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದ ಇಂದಿರಾ ಲಂಕೇಶ್(ಸಂಗ್ರಹ ಚಿತ್ರ)

ಗೌರಿ ಹತ್ಯೆಯಿಂದ ನನ್ನ ಜೀವಸೆಲೆ ಕಳೆದುಹೋಗಿದೆ; ಇಂದಿರಾ ಲಂಕೇಶ್

ಪ್ರತಿದಿನ ರಾತ್ರಿ 10.30ಕ್ಕೆ ನನ್ನ ಎದೆಬಡಿತ ಜೋರಾಗಿ ಬಡಿಯಲು ಆರಂಭವಾಗುತ್ತದೆ. ನನಗೆ ಗೊತ್ತಿಲ್ಲದಂತೆ...

ಬೆಂಗಳೂರು: ಪ್ರತಿದಿನ ರಾತ್ರಿ 10.30ಕ್ಕೆ ನನ್ನ ಎದೆಬಡಿತ ಜೋರಾಗಿ ಬಡಿಯಲು ಆರಂಭವಾಗುತ್ತದೆ. ನನಗೆ ಗೊತ್ತಿಲ್ಲದಂತೆ ನನ್ನ ಕೈಗಳು ಮೊಬೈಲ್ ಫೋನ್ ನತ್ತ ಚಾಚುತ್ತದೆ. ಫೋನ್ ನ ಇನ್ ಬಾಕ್ಸ್ ನಲ್ಲಿ ನನ್ನ ಮಗಳು ಕಳುಹಿಸುತ್ತಿದ್ದ ಹಳೆ ಸಂದೇಶಗಳನ್ನು ಓದುತ್ತೇನೆ, ಅಮ್ಮ ಮನೆ ತಲುಪಿದೆ ಎಂಬ ಸಂದೇಶ ಓದಿಯೇ ನಾನು ಮಲಗಲು ಹೋಗುವುದು ಇದು ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಮಾತುಗಳು. ತಮ್ಮ ಮಗಳು ಇಲ್ಲದೆ ಜೀವನ ಸಾಗಿಸಲು ಎಷ್ಟು ಕಷ್ಟವಾಗುತ್ತಿದೆ ಎಂಬ ಮಾತುಗಳನ್ನು ಬಹಳ ದುಃಖದಿಂದ ಆಡಿದ್ದಾರೆ.

ಮಗಳು ಗೌರಿಯನ್ನು ತಾಯಿ ಮತ್ತು ಗೌರಮ್ಮ ಎಂದು ಸಂಬೋಧಿಸುವ ಇಂದಿರಾ ಲಂಕೇಶ್, ನನ್ನ ಮಗಳ ಅಗಲುವಿಕೆಯನ್ನು ಪದಗಳಲ್ಲಿ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಸಮಾಧಾನಮಾಡಿಕೊಳ್ಳಲು ಕಳೆದ ಒಂದು ವರ್ಷದಿಂದ ಹರಸಾಹಸಪಡುತ್ತಿದ್ದೇನೆ. ಪ್ರತಿದಿನ ರಾತ್ರಿ ನನ್ನ ಮೊಬೈಲ್ ನಲ್ಲಿ ಮಗಳು ಕಳುಹಿಸುತ್ತಿದ್ದ ಹಳೆ ಸಂದೇಶಗಳನ್ನು ತಪ್ಪದೆ ಓದುತ್ತೇನೆ ಎಂದು ಕಣ್ಣೀರಿಡುತ್ತಾರೆ ಇಂದಿರಾ ಲಂಕೇಶ್.

ನಮಗೆ ಮಗಳು ಹುಟ್ಟಿದಾಗ ಗೌರಿ ಎಂದು ಹೆಸರಿಡಲು ತೀರ್ಮಾನಿಸಿದೆವು. ಆಕೆ ಹಲವು ವಿಚಾರಗಳಲ್ಲಿ ನನಗೆ ತಾಯಿ. ನಾನಿಂದು ಈ ರೀತಿ ಇರಲು ಆಕೆಯೇ ಕಾರಣ. ನನಗೆ ಬರೆಯಲು ಕೂಡ ಅವಳೇ ಪ್ರೇರಣೆ ಎನ್ನುತ್ತಾರೆ ಇಂದಿರಾ.

ಗೌರಿ ಲಂಕೇಶ್ ಪತ್ರಿಕೆಗೆ ಬರೆಯಲು ಮಗಳು ಗೌರಿ ಒತ್ತಾಯಿಸಿದ್ದನ್ನು ನೆನಪಿಸಿಕೊಂಡ ಅವರು ನಮ್ಮ ಜೀವನದಲ್ಲಿ ಹಲವು ಏರಿಳಿತಗಳಾದವು. ಮಕ್ಕಳಲ್ಲಿ ಎಲ್ಲರಿಗಿಂತ ಹಿರಿಯವಳಾದ ಗೌರಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದಳು. ನನ್ನ ಜೀವನದಲ್ಲಿನ ಅನುಭವಗಳನ್ನು ಬರೆಯಲು ಆಕೆ ನನಗೆ ಒತ್ತಾಯಿಸುತ್ತಿದ್ದಳು. ನಂತರ ಅದು ಪುಸ್ತಕ ರೂಪದಲ್ಲಿ ಹೊರಬಂತು, ಅದಕ್ಕೆ ನನಗೆ ಖುಷಿಯಿದೆ ಎನ್ನುತ್ತಾರೆ.

ಗೌರಿ ಲಂಕೇಶ್, ತಂದೆ ಲಂಕೇಶ್ ಜೊತೆಗೆ ಹೆಚ್ಚು ಆಪ್ತವಾಗಿದ್ದರೂ ಕೂಡ ಅಮ್ಮ ಯಾವಾಗಲೂ ಜೊತೆಗೆ ಇರಬೇಕೆಂದು ಬಯಸುತ್ತಿದ್ದರಂತೆ. ಆಕೆಯ ವಿಚ್ಛೇದನದ ನಂತರ ನಾನು ಆಕೆಯ ಜೊತೆ ವಾಸಿಸಲು ಆರಂಭಿಸಿದೆ ಮತ್ತು ಆಕೆಗೆ ಹೆಚ್ಚು ಆತ್ಮೀಯಳಾಗಿದ್ದೆ. ತೀರಾ ಇತ್ತೀಚೆಗಷ್ಟೆ ನಾನು ಕವಿತಾ ಜೊತೆ ವಾಸಿಸಲು ಆರಂಭಿಸಿದ್ದು, ಅದು ಆಕೆಯ ಮಗಳನ್ನು ನೋಡಿಕೊಳ್ಳಲು.

ಗೌರಿ ಯಾವಾಗಲೂ ಮಹಿಳೆಯರಿಗೆ ಗೌರವ ನೀಡುತ್ತಿದ್ದಳು ಮತ್ತು ಬೇರೆಯವರಿಗಾಗಿ ಬದುಕು ನಡೆಸಿದವಳು. ಆಕೆಗೆ ಬೇರೆಯವರ ಮೇಲೆ ಅತೀವ ಕಾಳಜಿಯಿತ್ತು. ಅನೇಕ ಸಲ ನಾನು ಅವಳನ್ನು ಕೇಳುತ್ತಿದ್ದೆ, ಇದೆಲ್ಲಾ ನೀನು ಏಕೆ ಮಾಡುತ್ತಿದ್ದಿ, ನಿನಗೆ ಇದರಿಂದ ಏನು ಸಿಗುತ್ತಿದೆ ಎಂದು ಕೇಳುತ್ತಿದ್ದೆ. ಆಕೆಯ ಸಮಾಜಸೇವೆಯಿಂದ ಅವಳಿಗೆ ಸಾಕಷ್ಟು ಗೌರವ, ಪ್ರೀತಿ, ಜನಪ್ರಿಯತೆ ಜನರಿಂದ ಸಿಕ್ಕಿದೆ. ಗೌರಿಯ ಕೊಲೆ ನಮಗೆ ಸಹಿಸಿಕೊಳ್ಳಲಾಗದಷ್ಟು ನೋವು ತಂದಿದೆ. ನನ್ನ ಜೀವವೇ ಹೋದಂತಾಗಿದೆ, ಮೊಮ್ಮಕ್ಕಳನ್ನು ನೋಡಿ ಸಮಾಧಾನಪಡುತ್ತೇನೆ ಎನ್ನುತ್ತಾರೆ.

ನನಗೆ ಗೌರಿ ಬಗ್ಗೆ ಆತಂಕವಿತ್ತು, ಪ್ರತಿದಿನ ರಾತ್ರಿ ತಡವಾಗಿ ಒಬ್ಬಳೇ ಕಾರು ಚಲಾಯಿಸಿಕೊಂಡು ಮನೆಗೆ ಬರುತ್ತಿದ್ದಳು. ಮನೆಗೆ ತಲುಪಿದ ತಕ್ಷಣ ನನಗೆ ಮೆಸೇಜ್ ಮಾಡುತ್ತಿದ್ದಳು, ಕೊಲೆಯಾದ ದಿನ ರಾತ್ರಿ ನನಗೆ ಪಕ್ಕದ ಮನೆಯವರಿಂದ ಫೋನ್ ಬಂತು, ಗೌರಿ ಕುಸಿದು ಬಿದ್ದಿದ್ದಾಳೆ ಎಂದು. ಕವಿತಾಳ ಮಗಳು ಇಶಾ ಮತ್ತು ನಾನು ಕೂಡಲೇ ಹೋದೆವು. ಇದೆಲ್ಲಾ ಕೇವಲ 15 ನಿಮಿಷಗಳಲ್ಲಿ ಆಗಿ ಹೋಯಿತು, ನಾನು ಅಂದುಕೊಂಡೆ ಸರಿಯಾಗಿ ಊಟ ತಿಂಡಿ ಮಾಡಿರಲಿಕ್ಕಿಲ್ಲ, ಹಾಗಾಗಿ ತಲೆಸುತ್ತಿ ಬಿದ್ದಿದ್ದಾಳೆ ಎಂದು, ಇಶಾ ನನ್ನನ್ನು ಸಮಾಧಾನ ಮಾಡುತ್ತಲೇ ಇದ್ದಳು ಎಂದು ಇಂದಿರಾ ಹೇಳುತ್ತಾರೆ.

ಇನ್ನು ಗೌರಿ ಲಂಕೇಶ್ ಹತ್ಯೆಯ ತನಿಖೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶೇಷ ತನಿಖಾಧಿಕಾರಿ ಬಿ ಕೆ ಸಿಂಗ್ ಅವರು ನಮಗೆ ಕುಟುಂಬ ಸದಸ್ಯರಂತೆ ಆಗಿದ್ದಾರೆ. ತಮ್ಮ ಸೇವಾವಧಿಯಲ್ಲಿ ಯಾವ ಕೇಸುಗಳೂ ವಿಫಲವಾಗಿಲ್ಲ, ಈ ಕೇಸು ವಿಫಲವಾದರೆ ನನ್ನ ಮೊದಲನೇ ವೈಫಲ್ಯ ಎಂದು ಹೇಳುತ್ತಾರೆ. ಅವರು ಈ ಕೇಸಿನಲ್ಲಿ ಕೂಡ ಯಶಸ್ಸು ಕಾಣಲಿ ಎಂದು ಪ್ರತಿನಿತ್ಯ ಬೇಡಿಕೊಳ್ಳುತ್ತೇನೆ.ತನಿಖೆಯಲ್ಲಿ ಬಹಳ ಪ್ರಗತಿ ಸಾಧಿಸಿದ್ದಾರೆ ಎಂದು ನನಗೆ ಖುಷಿಯಾಗುತ್ತಿದೆ ಎಂದು ಮಾತು ಮುಗಿಸಿದರು ಇಂದಿರಾ ಲಂಕೇಶ್.

Related Stories

No stories found.

Advertisement

X
Kannada Prabha
www.kannadaprabha.com