
ಬೆಂಗಳೂರು: ಒಂಭತ್ತು ವರ್ಷಗಳ ನಂತರ ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳ ಪೈಕಿ 400 ಕಾಲೇಜುಗಳಿಗೆ ಕೊನೆಗೂ ಪ್ರಾಂಶುಪಾಲರ ನೇಮಕವಾಗದಲಿದೆ. ಈ ಪ್ರಾಂಶುಪಾಲರುಗಳು 5 ವರ್ಷಗಳ ಕಾಲಾವಧಿಗೆ ನೇಮಕಗೊಳ್ಳಲಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಈ ದಿಸೆಯಲ್ಲಿ ಹೊಸ ನೇಮಕಾತಿ ನಿಯಮವನ್ನು ರಚಿಸಿದೆ. ಹೊಸ ನಿಯಮ ಪ್ರಕಾರ, ಪ್ರಾಂಶುಪಾಲರ ಸೇವಾವಧಿ 5 ವರ್ಷಗಳಾಗಿದ್ದು ಬಡ್ತಿಯ ಆಧಾರದ ಮೇಲೆ ನೇಮಕಾತಿ ನಡೆಯುವುದಿಲ್ಲ. ಆದರೆ ಇದು ಬಡ್ತಿಗಾಗಿ ಕಾಯುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಅಸಮಾಧಾನ ತರಿಸಿದೆ.
ಸರ್ಕಾರಿ ಪದವಿ ಕಾಲೇಜು ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಪ್ರೊ ಪ್ರಕಾಶ್, ನೇರ ನೇಮಕಾತಿ ಮೂಲಕ 5 ವರ್ಷಗಳ ಅವಧಿಗೆ ಪ್ರಾಂಶುಪಾಲರನ್ನು ನೇಮಕ ಮಾಡಿದರೆ ಬಡ್ತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಉಪನ್ಯಾಸಕರ ಸ್ಥಿತಿಯೇನು ಎಂದು ಕೇಳುತ್ತಾರೆ. ಈಗಿರುವ ನಿಯಮಗಳ ಪ್ರಕಾರ ಬಡ್ತಿಯ ಆಧಾರದ ಮೇಲೆ ಪ್ರಾಂಶುಪಾಲರನ್ನು ಸರ್ಕಾರ ನೇಮಕ ಮಾಡಬೇಕು. ಹೊಸ ನಿಯಮ ತೆಗೆದುಹಾಕುವಂತೆ ನಾವು ಉನ್ನತ ಶಿಕ್ಷಣ ಸಚಿವರನ್ನು ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಮನವಿಯನ್ನು ಸರ್ಕಾರ ಪುರಸ್ಕರಿಸದಿದ್ದರೆ ಪ್ರತಿಭಟನೆ ನಡೆಸಿ ಕಾನೂನಾತ್ಮಕವಾಗಿ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
ಹೊಸ ನಿಯಮ ಜಾರಿಗೆ ಬಂದರೆ ಸಹಾಯಕ ಪ್ರೊಫೆಸರ್ ಆಗಿದ್ದವರು ಸಹಾಯಕ ಪ್ರೊಫೆಸರ್ ಆಗಿಯೇ ನಿವೃತ್ತರಾಗಬೇಕಾಗುತ್ತದೆ. ಅವರಿಗೆ ಬೇರೆ ಬಡ್ತಿ ಸಿಗುವುದಿಲ್ಲ ಎಂಬುದು ಅವರ ಅಸಮಾಧಾನವಾಗಿದೆ.
Advertisement