ಇಲ್ಲಿ ಸಚಿವರದ್ದು ಏನೂ ಇಲ್ಲ ಕಾರುಬಾರು, ಅಧಿಕಾರಿಗಳದ್ದೇ ಎಲ್ಲ ದರ್ಬಾರು!

ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರ ಗಮನಕ್ಕೆ ಬಾರದೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ...
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ

ಬೆಂಗಳೂರು; ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರ ಗಮನಕ್ಕೆ ಬಾರದೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸುವುದು ಮತ್ತು ದಾಖಲೆಗಳನ್ನು ವರ್ಗಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಅಂಶ ತಿಳಿದುಬಂದಿದೆ.

ಇತ್ತೀಚಿಗೆ ಇಲಾಖೆಯಲ್ಲಿನ ಈ ಎಲ್ಲಾ ಬೆಳವಣಿಗೆ ಸಚಿವರಿಗೆ ಸಿಟ್ಟು ತರಿಸಿದ್ದು, ಉನ್ನತ ಶಿಕ್ಷಣ ಇಲಾಖೆಯನ್ನು ನಿಭಾಯಿಸಲು ಸಾಧ್ಯವಾಗದೆ ಬೇರೆ ಖಾತೆಯನ್ನು ಕೇಳಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಮೂರು ವಿದ್ಯಮಾನಗಳಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ(ಕೆಎಸ್ಒಯು) ರಿಜಿಸ್ಟ್ರಾರ್ ನೇಮಕಾತಿ ವಿಚಾರ,  ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಅವರ ಸೇವಾವಧಿ ವಿಸ್ತರಣೆ ಮತ್ತು ದೊಡ್ಡ ಮೊತ್ತದ ಕೆಲವು ಕೆಲಸದ ಆದೇಶಗಳನ್ನು ಇಲಾಖೆಯ ಅಧಿಕಾರಿಗಳು ಸಚಿವರ ಗಮನಕ್ಕೆ ತಾರದೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಜಿ ಟಿ ದೇವೇಗೌಡ, ಈ ವಿಚಾರವನ್ನು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ಗಮನಕ್ಕೆ ಸಹ ತಂದಿದ್ದೇನೆ. ಅದಕ್ಕೆ ಸಚಿವ ರೇವಣ್ಣ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸಚಿವರ ಗಮನಕ್ಕೆ ತಾರದೆ ಯಾವುದೇ ಆದೇಶ ತರುವಂತಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ನನ್ನನ್ನು ಕತ್ತಲಲ್ಲಿರಿಸಿ ಕೆಎಸ್ಒಯು ರಿಜಿಸ್ಟ್ರಾರ್ ನೇಮಕ ಮಾಡಲಾಗಿದೆ ಎಂದು ಸಚಿವ ದೇವೇಗೌಡ ಹೇಳುತ್ತಾರೆ.

ನಿನ್ನೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು ಇಲಾಖೆಯ ಯೋಜನೆ ವಿಭಾಗದಿಂದ ಹಿರಿಯ ಅಧಿಕಾರಿಯೊಬ್ಬರನ್ನು ಸೇವೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಆ ಅಧಿಕಾರಿ ಸಚಿವರಿಗೆ ತಿಳಿಸದೆ ವಿವಿಧ ಯೋಜನೆಗಳಿಗೆ 108 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಮಲ್ಲಿಕಾ ಘಂಟಿ ಅವರ ಸೇವಾವಧಿ ವಿಸ್ತರಣೆ ಬಗ್ಗೆ ಕೇಳಿದ್ದಾಗ ಸಚಿವ ದೇವೇಗೌಡರು ತಮಗೆ ಈ ಬಗ್ಗೆ ಗೊತ್ತಿಲ್ಲ ಎಂದಿದ್ದರು. ಆದರೆ ರಾಜಭವನದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ರಾಜಭವನಕ್ಕೆ ಬಂದಿವೆ. ಈ ಎಲ್ಲಾ ವಿಷಯಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ ಕೆ ಎಸ್ ರಂಗಪ್ಪ ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com