ಸ್ವಾಧೀನ ಪತ್ರ ವಿತರಣೆ ವಿಳಂಬ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್

ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ ವಿತರಣೆ ವಿಳಂಬ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗೆ ಗೈರು ಹಾಜರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)....
ಸ್ವಾಧೀನ ಪತ್ರ ವಿತರಣೆ ವಿಳಂಬ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್
ಸ್ವಾಧೀನ ಪತ್ರ ವಿತರಣೆ ವಿಳಂಬ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್
ಬೆಂಗಳೂರು: ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ ವಿತರಣೆ ವಿಳಂಬ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗೆ ಗೈರು ಹಾಜರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಹೈಕೋರ್ಟ್ ಜಾಮೀನು ರಹಿತ ವಾರಂಟ್ (ಎನ್‍ಬಿ ಡಬ್ಲ್ಯು) ಜಾರಿ ಮಾಡಿದೆ. 
ಬೆಂಗಳೂರು ದಕ್ಷಿಣ ಜಿಲ್ಲೆ, ಬೇಗೂರು ತಾಲೂಕಿನ ಹುಳಿಮಾವು ಹೋಬಳಿಯಲ್ಲಿನ ವಾಲ್ ಮಾರ್ಕ್ ಅಪಾರ್ಟ್ ಮೆಂಟ್ ಕಟ್ಟಡದ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ ನೀಡಲು ಬಿಬಿಎಂಪಿ ನಿರಾಕರಿಸಿದೆ ಎಂದು ಆರೋಪಿಸಿ ನಾಕೋಡ ಕನ್ಸ್ ಟ್ರಕ್ಷನ್ ಕಂಪನಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆಗೆ ಹಾಜರಾಗದ ಬಿಬಿಎಂಪಿ ಆಯುಕ್ತರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಾಮೀನು ರಹಿತ ವಾರಂಟ್ ಜಾರಿ ಮಾಡಿತು. 
ಬಫರ್ ವಲಯ ಒತ್ತುವರಿಯಾಗಿದೆ ಎಂಬ ಆರೋಪದಡಿ ಬಿಬಿಎಂಪಿ ಅರ್ಜಿದಾರರಿಗೆ ವಸತಿ ಸ್ವಾಧೀನ ಪತ್ರ ನೀಡಲು ನಿರಾಕರಿಸಿದೆ. ಆದರೆ, ಬಿಡಿಎ ಈಗಾಗಲೇ ತಮ್ಮ ಭೂಮಿ ಒತ್ತುವರಿಯಾಗಿಲ್ಲ ಎಂದು ವರದಿ ನೀಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಪೀಠ, ಬಿಬಿಎಂಪಿ ಆಯುಕ್ತರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿತ್ತು. 
ಆದರೆ, ಮಂಗಳವಾರ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಆಯುಕ್ತರು ಚುನಾವಣೆ ಕಾರ್ಯದ ನಿಮಿತ್ತ ಹಾಜರಾಗುವುದು ತಡವಾಗಿದೆ. ಆದ್ದರಿಂದ ಸಮಯಾವಕಾಶ ನೀಡಬೇಕು. ಕೋರ್ಟ್ ಗೆ ಬರುತ್ತಾರೆ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸದ ನ್ಯಾಯಪೀಠ, ಬಿಬಿಎಂಪಿ ಆಯುಕ್ತರು ಖುದ್ದು ಹಾಜರಾಗಲೇಬೇಕು ಎಂದು ಸೂಚಿಸಿ ವಿಚಾರಣೆಯನ್ನು ಏ.3ಕ್ಕೆ ಮುಂದೂಡಿತು. 
ಪ್ರಕರಣವೇನು?
ಬೆಂಗಳೂರು ದಕ್ಷಿಣ ಜಿಲ್ಲೆ ಬೇಗೂರು ತಾಲೂಕಿನ ಹುಳಿಮಾವು ಹೋಬಳಿಯಲ್ಲಿ ಸರ್ವೆ ಸಂಖ್ಯೆ 52ರಲ್ಲಿನ ಬಫರ್ ವಲಯವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿ ಬಿಬಿಎಂಪಿ ಅಲ್ಲಿನ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪತ್ರ ನೀಡಲು ನಿರಾಕರಿಸಿತ್ತು. ಈ ಸಂಬಂಧ ನಿವಾಸಿಗಳು ಬಿಡಿಎಗೆ ದೂರು ಸಲ್ಲಿಸಿದ್ದರು.  2015ರ ಸೆಪ್ಟೆಂಬರ್ ನಲ್ಲಿ ಪ್ರದೇಶದ ಸರ್ವೆ ನಡೆಸಿದ್ದ ಬಿಡಿಎ, ಈ ಪ್ರದೇಶ ಸಂಪೂರ್ಣವಾಗಿ ಅರ್ಜಿದಾರ ನಿರ್ಮಾಣ ಸಂಸ್ಥೆಗೆ ಸೇರಿದ್ದು, ಅದನ್ನು  ಕಾನೂನುಬದ್ಧವಾಗಿಯೇ ಖರೀದಿಸಲಾಗಿದೆ ಎಂದು ವರದಿ ನೀಡಿತ್ತು. ಆದರೂ, ಬಿಬಿಎಂಪಿ ಸ್ವಾಧೀನ ಪತ್ರ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com