ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್; ಕಚೇರಿಯಲ್ಲಿ ಬೇಬಿ ಸಿಟ್ಟಿಂಗ್, ರಿಲ್ಯಾಕ್ಸ್ ರೂಂ!

ಮದುವೆಯಾಗಿ ಮಕ್ಕಳಾದ ನಂತರ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ನಿಭಾಯಿಸುವುದು ಮಹಿಳೆಯರಿಗೆ ಸವಾಲಿನ ಕೆಲಸ. ವಿಭಕ್ತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮದುವೆಯಾಗಿ ಮಕ್ಕಳಾದ ನಂತರ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ನಿಭಾಯಿಸುವುದು ಮಹಿಳೆಯರಿಗೆ ಸವಾಲಿನ ಕೆಲಸ. ವಿಭಕ್ತ ಕುಟುಂಬಗಳಲ್ಲಿ ವೃತ್ತಿಯಲ್ಲಿರುವ ಮಹಿಳೆಯರು ಮದುವೆಯಾದ ಬಳಿಕ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು, ಯಾರು ನೋಡಿಕೊಳ್ಳುವುದು, ಮಗುವನ್ನು ಎಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದು ಇದೇ ಚಿಂತೆ.
ಇನ್ನು ಮುಂದೆ ಸರ್ಕಾರಿ ಮಹಿಳಾ ನೌಕರರಿಗೆ ಆ ತಲೆಬಿಸಿಯಿಲ್ಲ. ನೀವು ಕೆಲಸ ಮಾಡುವಲ್ಲಿಯೇ ಮಕ್ಕಳನ್ನು ನೋಡಿಕೊಳ್ಳುವ ಸೌಲಭ್ಯ ಆರಂಭವಾಗಲಿದೆ.ನೀವು ಕೆಲಸ ಮಾಡುವಲ್ಲಿಗೇ ಮಕ್ಕಳನ್ನು ಕರೆದುಕೊಂಡು ಬರಬಹುದು, ಅಥವಾ ಕೆಲಸದ ಮಧ್ಯೆ ಸುಸ್ತು ಆಯಿತು, ಹುಷಾರಿಲ್ಲ ಎಂಬಿತ್ಯಾದಿ ಸಮಸ್ಯೆಗಳಿದ್ದರೆ ಸ್ವಲ್ಪ ಹೊತ್ತು ಬೇರೆ ಕೋಣೆಗೆ ಹೋಗಿ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು. 
ರಾಜ್ಯಾದ್ಯಂತ ಇರುವ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಡ್ರೆಸ್ಸಿಂಗ್ ರೂಂ ಆರಂಭವಾಗಲಿದ್ದು ಅಲ್ಲಿ ಮಹಿಳೆಯರು ಕೆಲ ಹೊತ್ತು ವಿಶ್ರಾಂತಿ ಪಡೆಯಬಹುದು. ಮತ್ತು ಇನ್ನೊಂದು ಪ್ರತ್ಯೇಕ ಕೊಠಡಿಯಲ್ಲಿ ಮಹಿಳೆಯರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಬೇಬಿ ಸಿಟ್ಟಿಂಗ್(ಶಿಶುಧಾಮ)ಗಳಿರುತ್ತವೆ, ಮಗುವನ್ನು ನೋಡಿಕೊಳ್ಳಲು ಬೇಕಾದ ಆಯಾಗಳು ಮತ್ತು ಇತರ ಸೌಕರ್ಯಗಳು ಇರುತ್ತವೆ. ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ ಕಲ್ಪಿಸಲು ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಇಂದು ಸುಮಾರು ಐದೂವರೆ ಲಕ್ಷಕ್ಕಿಂತ ಅಧಿಕ ಸರ್ಕಾರಿ ನೌಕರರಿದ್ದು ಅವರಲ್ಲಿ ಶೇಕಡಾ 30ರಷ್ಟು ಮಹಿಳೆಯರಾಗಿದ್ದಾರೆ. ಪ್ರಸ್ತುತ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿರುತ್ತದೆ ಹೊರತು ಬೇರೆ ಯಾವುದೇ ಸೌಲಭ್ಯಗಳಿರುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಿಡಬ್ಲ್ಯುಡಿ ಕೋಡ್ ಗೆ ತಿದ್ದುಪಡಿ ತರಲು ಮುಂದಾಗಿದೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಹಿರಿಯ ಲೋಕೋಪಯೋಗಿ ಇಲಾಖೆ ಅಧಿಕಾರಿ, ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ವಿಶೇಷ ಹೆಚ್ಚಿನ ಸೌಲಭ್ಯ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಶೌಚಾಲಯದ ಹೊರಗೆ ಪ್ರತ್ಯೇಕ ವಿಭಾಗ ಮಾಡಿ ಅಲ್ಲಿ ದೊಡ್ಡ ಕನ್ನಡಿ, ಪೀಠೋಪಕರಣ ಮತ್ತು ಇತರ ವ್ಯವಸ್ಥೆಗಳನ್ನಿಡುತ್ತೇವೆ. ಮಹಿಳೆಯರಿಗೆ ಸುಸ್ತಾದರೆ, ಆರೋಗ್ಯ ಸರಿಯಿಲ್ಲದಿದ್ದರೆ ಅಲ್ಲಿ ವಿಶ್ರಾಂತಿ ಪಡೆಯಬಹುದು. ಆದರೆ ಅಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇರಿದಂತೆ ಮಹಿಳಾ ಉದ್ಯೋಗಿಗಳ ವೃಂದ ಲೋಕೋಪಯೋಗಿ ಇಲಾಖೆಯ ಈ ಪ್ರಸ್ತಾವನೆಯನ್ನು ಸ್ವಾಗತಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com