ನೆರೆಗೆ ರಾಜ್ಯದಲ್ಲಿ 8 ತೂಗುಸೇತುವೆಗಳು ನಾಶ: ಗಳಗಳನೆ ಅತ್ತ ತೂಗು ಸೇತುವೆಯ ಸರದಾರ ಗಿರೀಶ್ ಭಾರಧ್ವಜ್

ರಾಜ್ಯದೆಲ್ಲೆಡೆ ಮಳೆಯಿಂದಾಗಿ ಅಪಾರ ನಷ್ಟ, ಸಾವು ನೋವು ಸಂಭವಿಸಿದೆ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಗ್ರಾಮೀಣ ಜನರ ಬದುಕನ್ನು...
ನೆರೆಗೆ ರಾಜ್ಯದಲ್ಲಿ 8 ತೂಗುಸೇತುವೆಗಳು ನಾಶ: ಗಳಗಳನೆ ಅತ್ತ ತೂಗು ಸೇತುವೆಯ ಸರದಾರ ಗಿರೀಶ್ ಭಾರಧ್ವಜ್

ರಾಜ್ಯದೆಲ್ಲೆಡೆ ಮಳೆಯಿಂದಾಗಿ ಅಪಾರ ನಷ್ಟ, ಸಾವು ನೋವು ಸಂಭವಿಸಿದೆ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಗ್ರಾಮೀಣ ಜನರ ಬದುಕನ್ನು ಬೆಸೆದಿದ್ದ ಎಂಟು ದೊಡ್ಡ ತೂಗು ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿವೆ ಸೇತುವೆಗಳ ನಿರ್ಮಾಣದ ರೂವಾರಿಯ ನೋವಿನ ಕಥನ ಇಲ್ಲಿದೆ.

ಗ್ರಾಮೀಣ ಜನರ ಬದುಕು ಜೋಡಿಸಲೆಂದೇ ಕಟ್ಟಲಾಗಿದ್ದ ತೂಗುಸೇತುವೆಗಳು ಈಗ ನಾಶವಾಗಿದೆ. ತೂಗು ಸೇತುವೆಯ ರೂವಾರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಈ ದುರಂತದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ  ತೀವ್ರ ನೋವು ಅನುಭವಿಸುತ್ತಿದ್ದಾರೆ.

ಈಗಾಗಲೇ ಭಾರೀ ಮಳೆಯ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹ ಮತ್ತು ಪ್ರವಾಹದಲ್ಲಿ ಕೊಚ್ಚಿ ಬಂದ ಮರಗಳ ಹೊಡೆತಕ್ಕೆ ಇವರು ರಾಜ್ಯದಲ್ಲಿ  ನಿರ್ಮಿಸಿದ ಎಂಟು ತೂಗುಸೇತುವೆಗಳು ತನ್ನ ಸ್ವರೂಪವನ್ನೇ ಕಳೆದುಕೊಂಡಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಮದುರ್ಗ, ಮೊದಗ, ಉತ್ತರಕನ್ನಡ ಜಿಲ್ಲೆಯ ಸಹಸ್ರಲಿಂಗ, ಡೋಂಗ್ರಿ, ಕುಮಟಾ ತೂಗುಸೇತುವೆಗಳು ಹಾನಿಗೊಳಗಾಗಿವೆ.  ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಾಂಡ್ಯ ಸೇತುವೆಗೂ ಹಾನಿಯಾಗಿದೆ. ಕೆಲವು ರಿಪೇರಿಯಾಗದ ರೀತಿಯಲ್ಲಿ ಹಾನಿಗೊಳಗಾಗದರೆ, ಕೆಲವೆಡೆ ಫಿಲ್ಲರ್;ಗಳು ಕುಸಿದಿವೆ. ಮತ್ತೆ ಕೆಲವೆಡೆ ರೋಪ್;ಗಳಿಗೆ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗುಸೇತುವೆಯಂತೂ ನಾಮಾವಶೇಷಗೊಂಡಿದೆ. 

ತನ್ನೆದುರೇ ತನ್ನ ಕೃತಿಗಳು ನಾಶವಾಗುತ್ತಿವೆಯಲ್ಲ ಎಂಬ ಅತೀವ ನೋವಿಗೊಳಗಾಗಿದ್ದಾರೆ. ಗಿರೀಶ್ ಅವರ ನೋವಿಗೂ ಅರ್ಥವಿದೆ. ಯಾಕೆಂದರೆ ತೂಗುಸೇತುವೆ ನಿರ್ಮಾಣ ಅವರ ಪಾಲಿಗೆ ಕೇವಲ ಉದ್ಯಮವೋ, ವ್ಯವಹಾರವೋ, ಲಾಭ ನಷ್ಟಗಳ ಲೆಕ್ಕಾಚಾರವೋ ಆಗಿರಲಿಲ್ಲ. ಅದೊಂದು ಭಾವನಾತ್ಮಕ ಸಂಗತಿಯಾಗಿತ್ತು. ಪ್ರೀತಿ ಮತ್ತು ಸಂಬಂಧಗಳ ಬಂಧವಾಗಿತ್ತು. ಆ ಕಾರಣಕ್ಕಾಗಿಯೇ ಭಾರದ್ವಾಜ್ ಇಂದು ವಿಶ್ವಮಾನ್ಯರು ಮತ್ತು ಅದಕ್ಕಾಗಿಯೇ ಅವರಿಗೆ ಪದ್ಮಶ್ರೀಯಂತಹ ಉನ್ನತ ಪ್ರಶಸ್ತಿಗಳು ಅರಸಿ ಬಂತು. ಆದರೆ ಪ್ರಕೃತಿಯ ಲೆಕ್ಕಾಚಾರ ಎಲ್ಲಕ್ಕಿಂತ ಮಿಗಿಲು. ಮಳೆಯ ರೌದ್ರನರ್ತನ ದೊಡ್ಡ ದೊಡ್ಡ ಸೇತುವೆಗಳನ್ನೇ ಅಡ್ಡಡ್ಡ ಮಲಗಿಸಿರುವಾಗ ತೂಗುಸೇತುವೆಗಳು ಅದಕ್ಕೊಂದು ಲೆಕ್ಕವಲ್ಲ.  ಆದರೂ ಸೂಕ್ಷ್ಮ ಮನಸ್ಸಿನ ಗಿರೀಶ್ ಭಾರದ್ವಾಜ್ ಅವರಿಗೆ ಆ ಪ್ರದೇಶದ ಜನರು ಫೋನ್ ಮೂಲಕ ಮಾಹಿತಿ ನೀಡಿದಾಗ ಅವರು ಚಿಂತೆಗೊಳಗಾಗಿದ್ದಾರೆ. ಈ ನೋವನ್ನು ಅವರು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ನನಗೆ ಸೇತುವೆಗಿಂತಲೂ ಅಲ್ಲಿನ ಜನರು ಮತ್ತೊಮ್ಮೆ ಸಂಕಟಕ್ಕೆ ಈಡಾದ ಚಿತ್ರವೇ ಕಾಣಿಸುತ್ತದೆ. ಜನರಿಂದ ಅಪಾರ ಪ್ರೀತಿ ಸಿಕ್ಕಿತ್ತು. ಎಲ್ಲವೂ ಕೊಚ್ಚಿಹೋಯಿತು. ಆ ಊರುಗಳ ಜನರ ದಿನನಿತ್ಯದ ಬದುಕಿಗೆ ಕೊಂಡಿಯಾಗಿದ್ದ ತೂಗುಸೇತುವೆ ನಾಶವಾಗಿರುವುದರಿಂದ ಅವರ ಬದುಕು ಮುಂದೆ ಹೇಗೆ ಎನ್ನುವುದೇ ನನಗೆ ಎದುರಾಗಿರುವ ಚಿಂತೆ;  ಎಂದು  ಯು.ಎನ್.ಐ ಜೊತೆಗೆ ತಮ್ಮ ಭಾವನೆ ಹಂಚಿಕೊಂಡಾಗ ಗಿರೀಶ್ ಭಾರಧ್ವಾಜರಲ್ಲಿ ದುಖ ಮಡುಗಟ್ಟಿತ್ತು. ಮಾತುಗಳು ಹೊರಡುತ್ತಿರಲಿಲ್ಲ.  ಭಾರಧ್ವಜ್ ಅವರ ಒಡನಾಡಿಯೂ ಆಗಿರುವ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ. ಒಂದೊಂದು ಸೇತುವೆಯೂ ಅವರ ಬಾಣಂತನದ ಕೂಸು ಎನ್ನುವ ರೀತಿಯಲ್ಲಿ ಜತನದಿಂದ ನಿರ್ಮಿಸಿದ್ದರು. ಈ ದುರ್ಘಟನೆ ಪುತ್ರಶೋಕಕ್ಕೆ ಸಮಾನವಾಗಿದೆ. ಅವರಿಗಾದ ನಷ್ಟದ ಮೌಲ್ಯವನ್ನು ಅಂದಾಜಿಸುವುದು ಸಾಧ್ಯವಿಲ್ಲ" ಎನ್ನುತ್ತಾರೆ. 

ಅತೀವ ನೋವು ಕಾಡಿದಾಗ ಗಿರೀಶ್ ಭಾರಧ್ವಾಜರು ಓಡೋಡಿ ಬಂದದ್ದೇ ಡಾ.ದಾಮ್ಲೆಯವರ; ಸ್ನೇಹದ ತಾಣಕ್ಕೆ. ಆ ಕ್ಷಣಗಳನ್ನು ದಾಮ್ಲೆಯವರೇ ಹೇಳಿಕೊಳ್ಳುವುದು ಹೀಗೆ:

ಗ್ರಾಮೀಣ ಸಂಪರ್ಕ ಸೇತು ಸಾಧಕ ಗಿರೀಶ್ ಭಾರದ್ವಾಜ್ ಸ್ವಭಾವತಃ ಎಲ್ಲರನ್ನೂ ಪ್ರೀತಿಯಿಂದ ಕಾಣುವವರು. ಅವರಿಗೆ ನನ್ನಲ್ಲಿ ಗೆಳೆತನಕ್ಕಿಂತ ಹೆಚ್ಚಿನ ಪ್ರೀತಿ. ಈವತ್ತು ಮನೆಗೆ ಬಂದವರೇ ಗಳಗಳನೆ ಅಳುವುದಕ್ಕಾರಂಭಿಸಿದರು. ಏನಾಯ್ತು ಗಿರೀಶ್ ಎಂದರೆ;ಹೋಯ್ತು.... ಹೋಯ್ತು...; ಎಂದು ಅತ್ತರು. ಏನು ಹೋಯ್ತು ಎಂತ ಕೇಳಿದರೆ ಹೇಳಲಾಗದಷ್ಟು ದುಃಖ ಒತ್ತರಿಸಿ ಬರುತ್ತಿತ್ತು. ಕೊನೆಗೊಮ್ಮೆ ಅರ್ಥಮಾಡಿಕೊಂಡೆ. ಅವರು ನಿರ್ಮಿಸಿದ ಎಂಟು ತೂಗುಸೇತುವೆಗಳು ಈ ಬಾರಿಯ ನೆರೆಗೆ ಕೊಚ್ಚಿ ಹೋಗಿವೆ. "ಅಯ್ಯೋ ನನ್ನ ಕಣ್ಣೆದುರೇ ಹೀಗಾಯಿತಲ್ಲಾ? ನನಗೆ ತುಂಬಾ ಒತ್ತಡ ಆಗ್ತಿದೆ. ತಡ್ಕೊಳ್ಳಿಕ್ಕೆ ಆಗ್ತಿಲ್ಲ. ನಿಮ್ಮಲ್ಲಿ ಹೇಳಿ ಹಗುರ ಮಾಡ್ಕೊಳ್ಳೋಣ ಅಂತ ಬಂದೆ; ಎಂದರು. 

ನಾನೂ ಎಲ್ಲರೂ ಹೇಳಬಹುದಾದ ರೀತಿಯಲ್ಲೇ ಹೇಳಿ ಸಮಾಧಾನಿಸಿದೆ. ಪ್ರಕೃತಿಯ ಎದುರು ಯಾರಾದರೂ ತಲೆಬಾಗಲೇಬೇಕು ಎಂದು ಸಂತೈಸಿದ್ದಾಗಿ ದಾಮ್ಲೆ ಸ್ನೇಹಿತನ ಸಂಕಟವನ್ನು ಹಂಚಿಕೊಂಡರು. ಕೆಲಸ ಮಾಡುವಲ್ಲೇ ಡೇರೆ ಹಾಕಿ ಕಾರ್ಮಿಕರೊಂದಿಗೆ ಕೆಲಸ ಆರಂಭಿಸಿದರೆ  ಆ ಸೇತುವೆಯ ಕೆಲಸ  ಪೂರ್ಣವಾಗದೆ ಇನ್ನೊಂದರ ಕೆಲಸ ಆರಂಭಿಸುತ್ತಿರಲಿಲ್ಲ. ಹೀಗಾಗಿ ಗಿರೀಶರಿಗೆ ಕುಸಿದು ಹೋದ ಒಂದೊಂದು ಸೇತುವೆಯ ಭೌತಿಕ ರಚನೆಯೊಂದಿಗೆ ಸಾಮಾಜಿಕ ಸಂಬಂಧ ಸೇತು ಕೂಡಾ ಕಡಿದಂತೆ ನೋವಾಗಿದೆ. ಪ್ರಕೃತಿ ಇದೀಗ ಎಲ್ಲವನ್ನೂ ಅಪೋಷನ ತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com