ವಿಧ‍್ವಂಸಕ ಕೃತ್ಯಕ್ಕೆ ಸಂಚು, ರಾಜ್ಯಾದ್ಯಂತ ಕಟ್ಟೆಚ್ಚರ: ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಬೆಂಗಳೂರು ಉಸ್ತುವಾರಿ

ಭಯೋತ್ಪಾದಕ ದಾಳಿ ನಡೆಯಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಬೆಂಗಳೂರು ಗಸ್ತಿನ ಉಸ್ತುವಾರಿ...
ಭಾಸ್ಕರ್ ರಾವ್
ಭಾಸ್ಕರ್ ರಾವ್
Updated on

ಬೆಂಗಳೂರು: ಭಯೋತ್ಪಾದಕ ದಾಳಿ ನಡೆಯಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಬೆಂಗಳೂರು ಗಸ್ತಿನ ಉಸ್ತುವಾರಿ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟೆಚ್ಚರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಗರದ ಎಲ್ಲಾ ವಿಭಾಗದ ಡಿಸಿಪಿ, ಎಸಿಪಿ, ಇನ್‍ಸ್ಪೆಕ್ಟರ್ ಹಾಗೂ ಇನ್ನಿತರ ಸಿಬ್ಬಂದಿ ಪಹರೆಯಲ್ಲಿ ತೊಡಗಿದ್ದಾರೆ ಎಂದರು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ಕೆಎಸ್‍ಆರ್ ಪಿ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಎಲ್ಲಾ ರಸ್ತೆಗಳಲ್ಲಿ ನಾಕಾಬಂಧಿ ಮಾಡಿ ನಗರಕ್ಕೆ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಮುಖವಾಗಿ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಕೆಪಿಎಸ್‍ಸಿ, ಹೈಕೋರ್ಟ್, ರಾಜಭವನ, ಮೆಟ್ರೋ, ವಿಮಾನ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳು, ಐಟಿಬಿಟಿ ಕಂಪನಿಗಳು, ಮಾಲುಗಳು, ಪ್ರಸಿದ್ಧ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಸೇರಿ ಮತ್ತಿತರ ಕಡೆ ಕಟ್ಟೆಚ್ಚರ ಘೋಷಿಸಲಾಗಿದ್ದು, ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದರು.

ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಲಾಡ್ಜ್ ಗಳಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ಸೂಕ್ತ ದಾಖಲೆಗಳನ್ನು ಪಡೆದುಕೊಂಡು ಅವರುಗಳಿಗೆ ಕೊಠಡಿ ನೀಡಬೇಕು ಎಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ವಿಧ‍್ವಂಸಕ ಕೃತ್ಯಗಳು ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಮಾಹಿತಿ ಹಾಗೂ ಪೊಲೀಸ್ ಇಲಾಖೆಯಿಂದ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ಹಾಗೂ ಸಾರಿಗೆ ಬಸ್ ಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಈ ಸಂಬಂಧ ರಾಜ್ಯ ರಸ್ತೆ ಸಾರಿಗೆ ನಿಯಮ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಸೂಚನೆ ಹೊರಡಿಸಿದ್ದು, ವಿಭಾಗೀಯ ಕಚೇರಿ, ತರಬೇತಿ ಕೇಂದ್ರ, ಬಸ್ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಹೆಚ್ಚು ಜಾಗರೂಕರಾಗಿ ಪ್ರಯಾಣಿಕರ, ಸಂದರ್ಶಕರ ಲಗೇಜ್ ಗಳನ್ನು ಕಡ್ಡಾಯವಾಗಿ ಪೂರ್ಣಪ್ರಮಾಣದಲ್ಲಿ ಪರಿಶೀಲಿಸಬೇಕು. ಬಸ್ ನಿಲ್ದಾಣಗಳ ಕಾರ್ಯ ವ್ಯಾಪ್ತಿ ಪ್ರದೇಶದ ಸುತ್ತಮುತ್ತ, ಪ್ರವೇಶ, ನಿರ್ಗಮನ ದ್ವಾರಗಳ ಬಳಿ 24 ಗಂಟೆಗಳ ಕಾಲ ನಿಗಾ ವಹಿಸಿ ಭದ್ರತೆ ಕೈಗೊಳ್ಳುವುದು, ನಿಗಮದ ಸಿಬ್ಬಂದಿ ಹೆಚ್ಚು ಜಾಗರೂಕರಾಗಿರುವಂತೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com