ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಹೊಸ ನೀತಿ ರೂಪಿಸಿ: ಅಧಿಕಾರಿಗಳಿಗೆ ಜಗದೀಶ್ ಶೆಟ್ಟರ್ ಸೂಚನೆ

ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿಯನ್ನು ಸಿದ್ಧಪಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ ಸಭೆ
ಸಚಿವ ಜಗದೀಶ್ ಶೆಟ್ಟರ್ ಸಭೆ
Updated on

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿಯನ್ನು ಸಿದ್ಧಪಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶೆಟ್ಟರ್‍ ಅವರು ಮೊದಲ ಬಾರಿಗೆ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಇಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹೂಡಿಕೆದಾರರಿಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಹೀಗಾಗಿ ನಮ್ಮ ರಾಜ್ಯವನ್ನು ಕೈಗಾರಿಕಾ ಸ್ನೇಹಿಯನ್ನಾಗಿ ನಿರ್ಮಾಣ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಹೂಡಿಕೆದಾರರು ಪ್ರಮುಖವಾಗಿ ಭೂಮಿ ಲಭ್ಯತೆ ಹಾಗೂ ನೀರು, ವಿದ್ಯುತ್ ನಂಥ ಮೂಲಸೌಕರ್ಯ ನಿರೀಕ್ಷಿಸುತ್ತಾರೆ. ಭೂಮಿ ಹಂಚಿಕೆ ವಿಚಾರದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಅಲ್ಲಿನ ಜಿಲ್ಲಾಧಿಕಾರಿಗಳು ಯಾವ ಮಾನದಂಡದ ಮೇಲೆ ಭೂಮಿ ನೀಡಲಿದ್ದಾರೆ. ಈ ಬಗ್ಗೆ ಸೂಕ್ತ ಮಾನದಂಡವನ್ನು ಸಿದ್ಧಪಡಿಸಬೇಕಿದ್ದು, ಬಳಿಕ ಇದನ್ನು ಸಚಿವ ಸಂಪುಟದ ಮುಂದಿಡಲಾಗುವುದು. ಹೀಗಾಗಿ ಭೂ ಹಂಚಿಕೆ ಮಾನದಂಡವನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳು ಇತ್ತೀಚಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿವೆ. ಕಠಿಣ ಕೆಲಸ ನಿಯಮ ಹಾಗೂ ಗೊಂದಲದ ವಾತಾವರಣದಿಂದ ಸಣ್ಣ ಉದ್ಯಮಕ್ಕೆ ಕಾಲಿಡುವವರು ಹಿಂಜರಿಯುವ ಸ್ಥಿತಿ ಇದೆ. ಭೂ ಹಂಚಿಕೆಯಲ್ಲಿಯೇ ಈ ಉದ್ಯಮಕ್ಕೆ ಹೆಚ್ಚು ಹೊಡೆತ ಬೀಳುತ್ತಿದೆ. ಒಂದೊಂದು ಸಂಸ್ಥೆಗೂ ಒಂದೊಂದು ರೀತಿಯ ಬೆಲೆ ನಿಗದಿ ಅವೈಜ್ಞಾನಿಕವಾಗಿದೆ. ಹೀಗಾಗಿ ಸ್ಥಳಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡುವ ಬಗ್ಗೆ ಚಿಂತಿಸಬೇಕು. ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಯಾವ ರೀತಿಯ ನಿಯಮ ತಂದಿದ್ದಾರೆ ಹಾಗೂ ಅಲ್ಲಿನ ನೀತಿ ಬಗ್ಗೆ ಪರಿಶೀಲನೆ ನಡೆಸಿ ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಆಸಕ್ತರಿಗೆ ಇಲಾಖೆ ಸ್ನೇಹಪರವಾದ ನಿಯಮಗಳನ್ನು ಕೊಡಬೇಕು. ಕೈಗಾರಿಕೆ ಕೇವಲ ಬೆಂಗಳೂರಿಗೇ ಸೀಮಿತವಾಗಬಾರದು. ಇತರೆ ಜಿಲ್ಲೆಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ನಿಯಮ ಸರಳೀಕರಣ ಮಾಡುವಂತೆ ಸೂಚಿಸಿದರು.

ಜೊತೆಗೆ ಸುಲಭ ರೀತಿಯಲ್ಲಿ ಉದ್ಯಮ ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗೆ ಪೂರಕ ವಾತಾವರಣವಿದೆ. ಹೂಡಿಕೆದಾರರಿಗೆ ಈ ಭಾಗದತ್ತ ಹೆಚ್ಚು ಆಕರ್ಷಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಚಿವರು ಸೂಚಿಸಿದರು.

ಈ ಸಭೆಯಾದ 10 ದಿನಗಳ ಬಳಿಕ ಎಲ್ಲಾ ಜಿಲ್ಲೆಗೂ ತಾವು ಭೇಟಿ ನೀಡಿ, ಸಭೆ ನಡೆಸುವುದಾಗಿ ಶೆಟ್ಟರ್‍ ತಿಳಿಸಿದರು. ಇನ್ನು ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತಾ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com