

ಗಂಗಾವತಿ: ವ್ಯಕ್ತಿಯನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಓರ್ವ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಹನುಮಸಾಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಪರಸಪ್ಪ ಕೊತಬಾಳ ಎಂಬ ವ್ಯಕ್ತಿಯನ್ನು ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯ ನಾಗೇಶ್ವರರಾವ್ ನೆಕ್ಕಂಟಿ, ಹಾಗೂ ಕಲಬುರ್ಗಿ ಮೂಲದ ರಾಘವೇಂದ್ರ ಹೂಗಾರ ಎಂಬಿಬ್ಬರು ಅಪಹರಿಸಿದ್ದರು. ಅಪಹರಣಕ್ಕೊಳಗಾದ ಪರಸಪ್ಪ ಅವರ ಮಗನಿಗೆ ಆರೋಪಿಗಳು ಫೋನ್ ಮಾಡಿ ಒಂದು ಲಕ್ಷ ರುಪಾಯಿ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಪರಸಪ್ಪ ಅವರ ಮಗ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಚಂದ್ರಶೇಖರ್, ಹನಮಸಾಗರ ಠಾಣೆಯ ಪಿಎಸ್ಐ ಅಮರೇಶ ಹುಬ್ಬಳ್ಳಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು 24 ಗಂಟೆಗಳಲ್ಲಿ ಜಿಲ್ಲೆಯ ಕಾರಟಗಿ ಬಳಿ ಬಂಧಿಸಿದ್ದಾರೆ. ಅಲ್ಲದೆ ಅಪಹರಣಕ್ಕೊಳಗಾಗಿದ್ದ ಪರಸಪ್ಪರನ್ನು ರಕ್ಷಿಸಿದ್ದಾರೆ.
ಬಂಧಿತರಿಂದ ಇಂಡಿಕಾ ಕಾರ್, ಕಬ್ಬಿಣದ ಪೈಪ್, ಕಬ್ಬಿಣದ ಚೈನ್, ಹಗ್ಗ, ಎರಡು ಮೊಬೈಲ್, ಕಬ್ಬಿಣದ ಜಾಲದ ಲಿವಿರ್ ವಶಪಡಿಸಿಕೊಳ್ಳಲಾಗಿದೆ..
ವರದಿ: ಎಂಜೆ ಶ್ರೀನಿವಾಸ್