ವಿಶ್ವ ಪ್ರಸಿದ್ಧ ಗಾಯಕ ಜಸ್ಟಿನ್ ಬೀಬರ್ ಲುಂಗಿ, ಶರ್ಟ್ ಧರಿಸಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೆ ಹೇಗಿರುತ್ತೆ ಊಹಿಸಿಕೊಳ್ಳಿ... ಬಹಳ ವಿಚಿತ್ರ ಎನಿಸುತ್ತದೆ ಅಲ್ಲವೇ? ಆದರೆ ಇದು ಕೇವಲ ಊಹೆಯಲ್ಲ, ಜಸ್ಟಿನ್ ಬೀಬರ್, ಲೆಜೆಂಡ್ ಮೈಕೆಲ್ ಜಾಕ್ಸನ್ ಅವರ ಹಾಡುಗಳನ್ನು ಅದೇ ಶೈಲಿಯಲ್ಲಿ ಹಾಡುವ ರೈತನೋರ್ವ ನಮ್ಮ ರಾಜ್ಯದಲ್ಲೇ ಇದ್ದಾರೆ.
ಹೆಸರು ಪ್ರದೀಪ್ ಹೆಚ್ ಆರ್ ಚಿತ್ರದುರ್ಗದ ಹಿರಿಯೂರಿನ ರೈತ. ಈತನ ಇಂಗ್ಲೀಷ್ ಮೋಹದ ಕಥೆಯೇ ಬಲು ಮಜವಾದದ್ದು. ಪದವಿ ಶಿಕ್ಷಣದಲ್ಲಿ ಇಂಗ್ಲೀಷ್ ವಿಷಯದಲ್ಲಿ ನಪಾಸಾಗಿದ್ದ ಪ್ರದೀಪ್ ಈಗ ಇಡಿಯ ಊರವರೆಲ್ಲಾ ಮೆಚ್ಚುವಂತಹ ಇಂಗ್ಲೀಷ್ ಗಾಯಕ! ಇದು ಇಂಗ್ಲೀಷ್ ನ್ನು ಕರಗತ ಮಾಡಿಕೊಂಡೇ ಸಿದ್ಧ ಎಂಬ ಪ್ರದೀಪ್ ಅವರ ದೃಢ ನಿರ್ಧಾರದ ಫಲ!
ತಮ್ಮ ಇಂಗ್ಲೀಷ್ ಹಾಡುಗಳನ್ನು ಹಾಡುವ ಆಸಕ್ತಿ ಬಗ್ಗೆ ಪ್ರದೀಪ್ ಹೀಗೆ ಹೇಳುತ್ತಾರೆ. "ಹೇಗಾದರೂ ಸರಿ ಇಂಗ್ಲೀಷ್ ವಿಷಯದಲ್ಲಿ ಪರಿಣತಿ ಹೊಂದಬೇಕೆಂಬ ಜಿದ್ದಿಗೆ ಬಿದ್ದಿದ್ದ ನನಗೆ ಇಂಗ್ಲೀಷ್ ಹಾಡುಗಳು ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿತು. ಬಹುಬೇಗ ಆ ಭಾಷೆಯ ಮೇಲೆ ಹಿಡಿತ ಸಾಧಿಸಿದರು.
ಈತನ ಸಂಗೀತ, ಹಾಡುಗಾರಿಕೆಯ ಕೃಷಿ ಕೇವಲ ಇಂಗ್ಲೀಷ್ ಗೆ ಮಾತ್ರ ಸೀಮಿತವಾಗಿಲ್ಲ. ಚೀನಾ ಜಪಾನ್ ಭಾಷೆ ಬರದೇ ಇದ್ದರೂ ಸಹ ಆ ಭಾಷೆಗಳ ಹಆಡುಗಳನ್ನು ಕೇಳಿ ಅದರಂತೆಯೇ ಹಾಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ ಪ್ರದೀಪ್.
ಹಿರಿಯೂರಿನ ವೇದಾವತಿ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿರುವ ಪ್ರದೀಪ್ ತಂದೆಯ ಇಚ್ಛೆಯಂತೆ ರೈತರಾಗಿ ಜೀವನ ನಡೆಸುತ್ತಿದ್ದಾರೆ. "ನಾನು ಕೆಲಸದ ವೇಳೆಯೂ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳುತ್ತೇನೆ, ದೇವರ ದಯೆಯಿಂದ ಧ್ವನಿಯನ್ನು ಬದಲಾವಣೆ ಮಾಡಿಕೊಳ್ಳುವ ಸಾಮರ್ಥ್ಯವೂ ಸಿಕ್ಕಿದ್ದು, ಮಿಮಿಕ್ರಿ ಮಾಡುತ್ತೇನೆ ಎಂದು ತಮ್ಮ ಪ್ರತಿಭೆ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.
ಹೊಲದಲ್ಲಿ ವೆಸ್ಟ್ರನ್ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿದ್ದಾಗ ತಮ್ಮ ತಂದೆ ಬೈದಿದ್ದನ್ನೂ ಪ್ರದೀಪ್ ನೆನಪಿಸಿಕೊಳ್ಳುತ್ತಾರೆ. ಹಾಡು ಹೇಳುತ್ತಾ ಕೆಲಸ ಮಾಡಿದರೆ ದಣಿವು ತಿಳಿಯುವುದಿಲ್ಲ. ಕೆಲವೊಮ್ಮೆ ಕೇಳುತ್ತಾ ಕೇಳುತ್ತಾ ಹಾಗೆಯೇ ನನಗೇ ಅರಿವಿಲ್ಲದಂತೆ ಹೆಜ್ಜೆ ಹಾಕುತ್ತಿರುತ್ತೇನೆ ಎನ್ನುತ್ತಾರೆ ಪ್ರದೀಪ್
ಇಂಗ್ಲೀಷ್ ಹಾಡುಗಳನ್ನು ಕೇಳುವುದರಿಂದ ನನಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ನಾನು ಇಂದು ಏನಾಗಿದ್ದೇನೋ ಅದನ್ನು ಸಂತೋಷದಿಂದ ಆನಂದಿಸುವುದಕ್ಕೆ ಸಂಗೀತ ಸಹಕಾರಿ ಎಂದು ಪ್ರದೀಪ್ ಹೇಳಿದ್ದಾರೆ.
Advertisement