ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿ ಇಡೀ ಲಂಕೆ ಹೊತ್ತಿ ಉರಿಯಿತು, ದೇಶದ ಪರಿಸ್ಥಿತಿಯೂ ಹಾಗೇ ಆಗಬಹುದು: ಸಿ ಟಿ ರವಿ 

ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ ಗೋಧ್ರಾ ಹತ್ಯಾಕಾಂಡದ ರೀತಿಯಲ್ಲಿ ಕೊನೆಯಾಗಬಹುದು ಎಂದು ಸಚಿವ ಸಿ ಟಿ ರವಿ ಹೇಳಿಕೆ ನೀಡಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು ಮತ್ತು ಪ್ರತಿಪಕ್ಷ ನಾಯಕರು ಛೀಮಾರಿ ಹಾಕುತ್ತಿದ್ದಾರೆ.
ಸಿ ಟಿ ರವಿ
ಸಿ ಟಿ ರವಿ
Updated on

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ ಗೋಧ್ರಾ ಹತ್ಯಾಕಾಂಡದ ರೀತಿಯಲ್ಲಿ ಕೊನೆಯಾಗಬಹುದು ಎಂದು ಸಚಿವ ಸಿ ಟಿ ರವಿ ಹೇಳಿಕೆ ನೀಡಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು ಮತ್ತು ಪ್ರತಿಪಕ್ಷ ನಾಯಕರು ಛೀಮಾರಿ ಹಾಕುತ್ತಿದ್ದಾರೆ.


ಬಹುಸಂಖ್ಯಾತ ಮಂದಿ ತಾಳ್ಮೆ ಕಳೆದುಕೊಂಡಾಗ ಪರಿಸ್ಥಿತಿ ಏನಾಗುತ್ತದೆ ಎಂದು ನೀವು ಮರೆತುಹೋಗಿದ್ದರೆ ಗೋಧ್ರಾದಲ್ಲಿ ಏನಾಯಿತು ಎಂದು ನೆನಪಿಸಿಕೊಳ್ಳಿ. ಇಲ್ಲಿ ಕೂಡ ಅಂತಹದ್ದೇ ಮರುಕಳಿಸಬಹುದು, ಬಹುಸಂಖ್ಯಾತ ಮಂದಿಯ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಉದ್ರೇಕಗೊಳಿಸುವ ರೀತಿ ಹೇಳಿಕೆ ನೀಡಿದ್ದರು.


ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಮಾಜಿ ಸಚಿವ ಯು ಟಿ ಖಾದರ್ ನೀಡಿದ್ದ ಹೇಳಿಕೆಗೆ ಸಚಿವ ಸಿ ಟಿ ರವಿ ಈ ಹೇಳಿಕೆ ನೀಡಿದ್ದರು.


ಇದೀಗ ಸಚಿವ ಸಿ ಟಿ ರವಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್, ಸಚಿವ ಸಿಟಿ ರವಿ ಪ್ರಚೋದನಕಾರಿಯಾಗಿ ಬೆದರಿಕೆಯೊಡ್ಡಿದ್ದಾರೆ. ಪೊಲೀಸರು ಅವರ ವಿರುದ್ಧ ಕೂಡಲೇ ಕೇಸು ದಾಖಲಿಸಿ ಬಂಧಿಸಬೇಕು. ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಅವರು ಈ ರೀತಿ ಮಾತನಾಡಬಾರದು ಎಂದು ಹೇಳಿದ್ದರು.


ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಹ ಸಾರ್ವಜನಿಕರು ಸಿ ಟಿ ರವಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಸಿ ಟಿ ರವಿಯವರು 2002ರ ಗೋಧ್ರಾ ಹತ್ಯಾಕಾಂಡವನ್ನು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಗುಜರಾತ್ ಮಾದರಿಯಲ್ಲಿ ಕರ್ನಾಟಕವನ್ನು ಮಾಡುತ್ತೇವೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಕೂಡ ಹೇಳುತ್ತಿದ್ದಾರೆ ಎಂದು ರಕ್ಷಾ ರಾಮಯ್ಯ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಸಟಿವ ಸಿಟಿ ರವಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಸಹ ಒತ್ತಾಯಿಸಿದ್ದಾರೆ.


ಮಂಗಳೂರಿನಲ್ಲಿ ಮೊನ್ನೆ ಗುರುವಾರ ಪೊಲೀಸರ ಗೋಲಿಬಾರ್ ನಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಹ ಯು ಟಿ ಖಾದರ್ ಮೇಲೆ ಆರೋಪ ಹೊರಿಸಿದ್ದರು. 


ಇನ್ನು ಈ ಹೇಳಿಕೆ ಬಗ್ಗೆ ಸಚಿವ ಸಿ ಟಿ ರವಿ ಅವರನ್ನು ಸಂಪರ್ಕಿಸಿ ಕೇಳಿದಾಗ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಖಾದರ್ ಅವರೇ ಮೊದಲು ಬೆಂಕಿ ಹಚ್ಚಲು ಆರಂಭಿಸಿದ್ದು, ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಟ್ಟೆ, ಅವರಂಥವರೇ ಗೋಧ್ರಾದಲ್ಲಿ ಬೆಂಕಿ ಹಚ್ಚಲು ಆರಂಭಿಸಿದ್ದು ಎಂದರು.


ಲಂಕೆಯಲ್ಲಿ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದಾಗ ಏನಾಯ್ತು, ಇಡೀ ಲಂಕೆ ಹೊತ್ತಿ ಉರಿಯಿತು, ಆ ರೀತಿ ಆಗಬಹುದು ಎಂದು ಹೇಳಲು ನಾನು ಪ್ರಯತ್ನಿಸಿದೆ ಎಂದರು.


ಇನ್ನು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ದ್ವೇಷ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು. ಯು ಟಿ ಖಾದರ್ ವಿರುದ್ಧ ತಮ್ಮ ಸರ್ಕಾರ ಕೇಸು ದಾಖಲಿಸುತ್ತದೆಯೇ ಎಂದು ಕೇಳಿದಾಗ ಅದಕ್ಕೆ ಸ್ಪಷ್ಟವಾಗಿ ಉತ್ತರಿಸಲಿಲ್ಲ, ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ನೀವೇ ಹೇಳಿ ಎಂದು ಸುದ್ದಿಗಾರರಲ್ಲಿ ಕೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com