ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

2ನೇ ಹಂತದ ನಗರಗಳಲ್ಲಿ ಹೂಡಿಕೆ ಆಕರ್ಷಿಸಲು ಸೋಮವಾರ ಮುಂಬೈಯಲ್ಲಿ ರೋಡ್ ಶೋ- ಜಗದೀಶ್ ಶೆಟ್ಟರ್ 

ರಾಜ್ಯದ ಎರಡನೇ ಹಂತದ ನಗರಗಳಿಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಕೈಗಾರಿಕೋದ್ಯಮಿಗಳನ್ನು ಸೆಳೆಯಲು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆಯಲ್ಲಿ ಮುಂಬಯಿಯಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಎರಡು ದಿನಗಳ ಕಾಲ ಸರಣಿ ಸಭೆ ನಡೆಸುವುದಾಗಿ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
Published on

ಬೆಂಗಳೂರು: ರಾಜ್ಯದ ಎರಡನೇ ಹಂತದ ನಗರಗಳಿಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಕೈಗಾರಿಕೋದ್ಯಮಿಗಳನ್ನು ಸೆಳೆಯಲು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆಯಲ್ಲಿ ಮುಂಬಯಿಯಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಎರಡು ದಿನಗಳ ಕಾಲ ಸರಣಿ ಸಭೆ ನಡೆಸುವುದಾಗಿ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.  

ಪ್ರಹ್ಲಾದ್ ಜೋಶಿ ಅವರ ಜತೆ ಮುಂಬೈನಲ್ಲಿ ರೋಡ್ ಶೋ ನಡೆಸುತ್ತಿದ್ದು, ಫೆಬ್ರವರಿ 2ನೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಇನ್ ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಭಾಗವಹಿಸುವಂತೆ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಜಗದೀಶ್ ಶೆಟ್ಟರ್, ಸೋಮುವಾರ ಬೆಳಿಗ್ಗೆಯಿಂದ ಕೈಗಾರಿಕೋದ್ಯಮಿಗಳ ಜೊತೆ ಸರಣಿ ಸಭೆಗಳನ್ನು ಆಯೋಜಿಸಲಾಗಿದೆ. ಟಾಟಾ ಗ್ರೂಫ್ ನ ಅಧ್ಯಕ್ಷರಾದ ಚಂದ್ರಶೇಖರನ್ ಮಹೀಂದ್ರ ಅಂಡ್ ಮಹಿಂದ್ರ ಲಿಮಿಟೆಡ್ ನ ಅಧ್ಯಕ್ಷ ಆನಂದ್ ಮಹೀಂದ್ರ, ಗೋದ್ರೇಜ್ ಗ್ರೂಪ್ ನ ಅಧ್ಯಕ್ಷರಾದ ಆದಿ ಗೋದ್ರೇಜ್ ಜೊತೆಯಲ್ಲಿ ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

ಇದಕ್ಕೂ ಮುನ್ನ ಕನ್ಯೂಮರ್ ಗೂಡ್ಸ್  ಕಂಫನಿಗಳಾದ, ಜ್ಯೋತಿ ಲ್ಯಾಬ್ಸ್ ಲಿಮಿಟೆಡ್ ಎಸಿಸಿ ಲಿಮಿಟೆಡ್ ಹುಟಮಕಿ ಪಿಪಿಲ್ ಲಿಮಿಟೆಡ್ ಜೋನ್ಸ್ ಲ್ಯಾಂಗ್ ಲ್ಯಾಸೆಲ್ಲೆ, ಇಂಡಕೌಂಟ್ ಪ್ರಮುಖರ ಜೊತೆಯಲ್ಲಿಯೂ ಸಭೆಗಳು ನಡೆಯಲಿವೆ ಎಂದು ಹೇಳಿದರು. 

ಸಂಜೆ ನಾರಿಮನ್ ಪಾಯಿಂಟ್ ನಲ್ಲಿರುವ ಟ್ರಿಡೆಂಟ್ ಹೋಟೇಲ್ ನಲ್ಲಿ ರೋಡ್ ಶೋ ನಡೆಯಲಿದ್ದು, ರಾಜ್ಯದಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ ಹಾಗೂ ಸೌಲಭ್ಯಗಳ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಹೂಡಿಕೆಯನ್ನು ಮಾಡಿರುವ ಕೈಗಾರಿಕೋದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳಲಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಇನ್ ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಫೆಬ್ರವರಿ ಎರಡನೇ ವಾರದಲ್ಲಿ ಈ ಸಮಾವೇಶ ನಡೆಯಲಿದ್ದು, ಮುಂದಿನ ಹಂತದಲ್ಲಿ ಬೆಳಗಾವಿ, ಗುಲ್ಬರ್ಗಾ, ಮೈಸೂರು, ದಾವಣಗೆರೆ, ಮಂಗಳೂರು, ಹಾಸನ, ಹಾಗೂ ಶಿವಮೊಗ್ಗ ಸೇರಿದಂತೆ ಎರಡನೇ ಹಂತದ ನಗರಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುವುದು ಎಂದು ಹೇಳಿದರು. 

ರಾಜ್ಯದಲ್ಲಿ ವಿಮಾನ ಸಂಪರ್ಕ ಹೆಚ್ಚಾಗಿದೆ. ಕೈಗಾರಿಕೋದ್ಯಮಿಗಳು ಬೆಂಗಳೂರು ಹೊರತುಪಡಿಸಿ ಇತರೇ ಜಿಲ್ಲೆಗಳಲ್ಲೂ ಹೂಡಿಕೆ ಮಾಡಲು ಇದು ಅನುಕೂಲ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಹೂಡಿಕೆಯ ವಾತಾವರಣ ಬದಲಾಗಿದೆ. ಈಗಾಗಲೇ ಹೈದ್ರಾಬಾದ್ ಮಹಾರಾಷ್ಟ್ರ ಹಾಗೂ ಇನ್ನಿತರೆ ರಾಜ್ಯಗಳ ಕೈಗಾರಿಕೋದ್ಯಮಿಗಳು ನಮ್ಮ ಜೊತೆ ಚರ್ಚೆ ನಡೆಸಿದ್ದು, ಬೆಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಕೈಗಾರಿಕೆಯನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. ಇವರಿಗೆ ಅಗತ್ಯವಿರುವ ಅನುಕೂಲತೆಗಳನ್ನು ರಾಜ್ಯ ಸರಕಾರ ಮಾಡಿಕೊಡುತ್ತಿದೆ ಎಂದು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com